ಅಕ್ರಮ ಜಂಬಿಟ್ಟಿಗೆ–ಮರಳು ಸಾಗಾಣಿಕೆಗೆ ಬ್ರೇಕ್: ತಹಶೀಲ್ದಾರ್ ಡಾ. ಪ್ರತಿಭಾ ಆರ್ ದಾಳಿ, 2 ಲಾರಿಗಳ ಜಪ್ತಿ -ಕಹಳೆ ನ್ಯೂಸ್

ಸಾಗರ: ತಾಲೂಕಿನಲ್ಲಿ ಅಕ್ರಮ ಜಂಬಿಟ್ಟಿಗೆ ಹಾಗೂ ಮರಳು ಸಾಗಾಣಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ತಹಶೀಲ್ದಾರ್ ಡಾ. ಪ್ರತಿಭಾ ಆರ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ದಾಳಿ ನಡೆಸಿ, ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ ಎರಡು ಲಾರಿಗಳನ್ನು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಂಡಿದೆ.
ಖಚಿತ ಮಾಹಿತಿಯ ಮೇರೆಗೆ ಸ್ಥಳಕ್ಕೆ ಧಾವಿಸಿದ ತಹಶೀಲ್ದಾರ್ ಡಾ. ಪ್ರತಿಭಾ ಆರ್ ಅವರು ಸರ್ವೇ ನಂ. 211ರಲ್ಲಿ ನಡೆಯುತ್ತಿದ್ದ ಅಕ್ರಮ ಜಂಬಿಟ್ಟಿಗೆ ಗಣಿಗಾರಿಕೆ ಹಾಗೂ ಸಾಗಾಣಿಕೆಯನ್ನು ಪರಿಶೀಲಿಸಿ ಸಂಬಂಧಪಟ್ಟವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಸೂಚನೆ ನೀಡಿದ್ದಾರೆ.
“ನನ್ನ ಸಾಗರ ತಾಲೂಕಿನ ವ್ಯಾಪ್ತಿಯಲ್ಲಿ ಯಾವುದೇ ಅಕ್ರಮ ಮರಳು ಅಥವಾ ಜಂಬಿಟ್ಟಿಗೆ ಸಾಗಾಣಿಕೆಗೆ ಅವಕಾಶ ನೀಡುವುದಿಲ್ಲ. ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುವುದು” ಎಂದು ತಹಶೀಲ್ದಾರ್ ಡಾ. ಪ್ರತಿಭಾ ಆರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ದಾಳಿ ವೇಳೆ ಪಿಡಿಒ ರಾಘವೇಂದ್ರ, ಬೀಟ್ ಪೊಲೀಸ್ ಮಂಜುನಾಥ್, ಗ್ರಾಮ ಸಹಾಯಕ ಲೋಕೇಶ್, ಗ್ರಾಮ ಆಡಳಿತ ಅಧಿಕಾರಿ ಭೀಮಣ್ಣ ಹಾಗೂ ರೆವೆನ್ಯೂ ಇನ್ಸ್‌ಪೆಕ್ಟರ್ ವಿನಾಯಕ ಉಪಸ್ಥಿತರಿದ್ದರು.
ಅಕ್ರಮ ಚಟುವಟಿಕೆಗಳ ವಿರುದ್ಧ ಕಟ್ಟುನಿಟ್ಟಿನ ನಿಲುವು ತಾಳಿರುವ ತಹಶೀಲ್ದಾರ್ ಅವರ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಆಡಳಿತದ ಬದ್ಧತೆಯನ್ನು ಜನರು ಶ್ಲಾಘಿಸಿದ್ದಾರೆ.











