ಸಂಬಳವನ್ನು ತವರಿಗೆ ಕಳುಹಿಸುತ್ತಿದ್ದ ಹೆಂಡತಿ : 2 ಲಕ್ಷ ಸುಪಾರಿ ಕೊಟ್ಟು ಪತ್ನಿಯ ಹತ್ಯೆಗೈದ ಪತಿ – ಕಹಳೆ ನ್ಯೂಸ್

ಹೈದರಾಬಾದ್: ತಾನು ದುಡಿದ ಹಣವನ್ನು ಪತ್ನಿ ತವರು ಮನೆಗೆ ಕಳುಹಿಸುತ್ತಿದ್ದಾಳೆ ಎಂದು ಕೋಪಗೊಂಡ ಪತಿ ಸುಪಾರಿ ಕೊಟ್ಟು ಹೆಂಡತಿಯನ್ನು ಕೊಲೆ ಮಾಡಿಸಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.
ಪತ್ನಿ ತನ್ನ ಆದಾಯವನ್ನು ತವರು ಮನೆಗೆ ಕಳುಹಿಸುತ್ತಿದ್ದಾಳೆ ಎಂಬ ಅಸಮಾಧಾನದಿಂದ ಪತಿ ಬಿಹಾರದಿಂದ ಸುಪಾರಿ ಹಂತಕರನ್ನು ಕರೆಸಿ ಕೊಲೆ ಮಾಡಿಸಿರುವುದಾಗಿ ತನಿಖೆಯಲ್ಲಿ ಬಹಿರಂಗವಾಗಿದೆ. ಬಿಹಾರ ಮೂಲದ ಅನಿಲ್ ಕುಮಾರ್ ಸಾಹ್ (38) ಮೇ 31ರಂದು ಪೊಲೀಸರಿಗೆ ದೂರು ನೀಡಿ, ತನ್ನ ಪತ್ನಿ ಮೀನಾ ದೇವಿಯನ್ನು (36) ಅಪರಿಚಿತರು ಅಪಹರಿಸಿ ಹತ್ಯೆ ಮಾಡಿದ್ದಾರೆ ಎಂದು ಹೇಳಿದ್ದ. ಸಂಗಾರೆಡ್ಡಿ ಜಿಲ್ಲೆಯ ಹಳ್ಳಿಯೊಂದರ ಬಳಿ ಬೈಕ್‌ನಲ್ಲಿ ಮನೆಗೆ ಮರಳುತ್ತಿದ್ದಾಗ ವಾಹನ ಕೆಟ್ಟು ನಿಂತಿದ್ದು, ಇದೇ ವೇಳೆ ಮೂವರು ದುಷ್ಕರ್ಮಿಗಳು ದಾಳಿ ನಡೆಸಿ ತನ್ನ ಪತ್ನಿಯನ್ನು ಎಳೆದುಕೊಂಡು ಹೋಗಿ ಕತ್ತು ಸೀಳಿ ಹತ್ಯೆ ಮಾಡಿದ್ದಾರೆ ಎಂದು ಅನಿಲ್ ಆರೋಪಿಸಿದ್ದ.
ಆದರೆ ಪ್ರಕರಣದ ತನಿಖೆ ಮುಂದುವರಿದಂತೆ ಅನಿಲ್ ನೀಡಿದ್ದ ಹೇಳಿಕೆಯಲ್ಲಿ ಪೊಲೀಸರಿಗೆ ಹಲವು ಅನುಮಾನಗಳು ಮೂಡಿದೆ. ಮೀನಾ ದೇವಿಯ ಸಹೋದರ ನೀಡಿದ ದೂರಿನ ಆಧಾರದ ಮೇಲೆ ವಿಶೇಷ ತನಿಖಾ ತಂಡಗಳನ್ನು ರಚಿಸಿದ ಪೊಲೀಸರು ಸತ್ಯಾಂಶವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಪತಿಯೇ ಪ್ರಕರಣದ ಮಾಸ್ಟರ್ ಮೈಂಡ್ ಎಂಬ ಅಸಲಿ ಸಂಗತಿ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಕಳೆದ ಮೂರು ವರ್ಷಗಳಿಂದ ಅನಿಲ್ ತನ್ನ ಪತ್ನಿಯ ವಿರುದ್ಧ ದ್ವೇಷ ಬೆಳೆಸಿಕೊಂಡಿದ್ದ. ತನ್ನ ಆದಾಯವನ್ನು ಪತ್ನಿ ನಿಯಂತ್ರಿಸುತ್ತಿದ್ದಳು ಹಾಗೂ ಆ ಹಣವನ್ನು ನಿಯಮಿತವಾಗಿ ತನ್ನ ತವರು ಮನೆಗೆ ಕಳುಹಿಸುತ್ತಿದ್ದಳು ಎಂಬ ಕಾರಣಕ್ಕೆ ಆತ ಅಸಮಾಧಾನಗೊಂಡಿದ್ದ ಎನ್ನಲಾಗಿದೆ. ಇದರ ಜೊತೆಗೆ ಅಪಘಾತವೊಂದರ ಬಳಿಕ ದೈಹಿಕವಾಗಿ ದುರ್ಬಲನಾಗಿದ್ದ ಅನಿಲ್, ಪತ್ನಿಯಿಂದ ನಿರ್ಲಕ್ಷ್ಯಕ್ಕೊಳಗಾಗಿದ್ದೇನೆ ಎಂಬ ಭಾವನೆಯನ್ನೂ ಹೊಂದಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಇದರಿಂದ ಪತ್ನಿಯನ್ನು ಹತ್ಯೆ ಮಾಡುವ ನಿರ್ಧಾರಕ್ಕೆ ಬಂದ ಅನಿಲ್, ಬಿಹಾರ ಮೂಲದ ರಿಂಕು ಕುಮಾರ್ ಎಂಬಾತನನ್ನು ಸಂಪರ್ಕಿಸಿ 2 ಲಕ್ಷ ರೂ.ಗೆ ಹೆಂಡತಿಯನ್ನು ಸಾಯಿಸುವಂತೆ ಸುಪಾರಿ ನೀಡಿದ್ದಾನೆ. ಮೇ 29ರಂದು ರಿಂಕು ಹಾಗೂ ಆತನ ಸಹಚರರಾದ ರಂಜನ್ ಮತ್ತು ನೀರಜ್ ಹೈದರಾಬಾದ್‌ಗೆ ಬಂದು ಅನಿಲ್‌ನನ್ನು ಭೇಟಿಯಾಗಿದ್ದರು. ಕೊಲೆ ನಡೆಯುವ ಸ್ಥಳ, ಸಮಯ ಮತ್ತು ಪರಾರಿಯಾಗುವ ಮಾರ್ಗ ಸೇರಿದಂತೆ ಎಲ್ಲವನ್ನೂ ಪೂರ್ವಯೋಜಿತವಾಗಿ ರೂಪಿಸಿ ಮೇ 30ರ ರಾತ್ರಿ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆಯ ಬಳಿಕ ಪ್ರಕರಣವನ್ನು ಅಪರಿಚಿತರಿಂದ ನಡೆದ ದಾಳಿಯಂತೆ ಬಿಂಬಿಸಲು ಅನಿಲ್ ನಾಟಕವಾಡಿದ್ದಾನೆ. ತನ್ನನ್ನು ರಕ್ಷಿಸಲು ಯತ್ನಿಸುವ ವೇಳೆ ಗಾಯಗಳಾಗಿವೆ ಎಂದು ಪೊಲೀಸರನ್ನು ನಂಬಿಸುವ ಸಲುವಾಗಿ ಅನಿಲ್ ತನ್ನ ಕೈ ಮತ್ತು ಬೆನ್ನಿನ ಮೇಲೆ ಸಣ್ಣಪುಟ್ಟ ಗಾಯಗಳನ್ನು ಮಾಡಿಕೊಂಡಿದ್ದ. ಬಳಿಕ ಬೈಕ್ ಅನ್ನು ನಗರದ ಹೊರವಲಯದಲ್ಲಿ ಬಿಟ್ಟು ಆರೋಪಿಗಳು ಬಿಹಾರಕ್ಕೆ ಪರಾರಿಯಾಗಿದ್ದರು.
ಈ ಕುರಿತು ಮಾಹಿತಿ ನೀಡಿದ ಸೆರಿಲಿಂಗಂಪಲ್ಲಿ ವಲಯದ ಡಿಸಿಪಿ ಶ್ರೀನಿವಾಸ್, ಪತ್ನಿಯನ್ನು ಅಪಹರಿಸಿ, ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಲಾಗಿದೆ ಎಂಬ ರೀತಿಯಲ್ಲಿ ಪತಿ ದೃಶ್ಯ ಸೃಷ್ಟಿಸಿದ್ದ. ಪೊಲೀಸರ ಮತ್ತು ಸಾರ್ವಜನಿಕರ ಗಮನ ಬೇರೆಡೆ ಸೆಳೆಯಲು ಆತ ತನ್ನ ಮೇಲೂ ಸಣ್ಣ ಗಾಯಗಳನ್ನು ಮಾಡಿಕೊಂಡಿದ್ದ ಎಂದು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರಂಜನ್‌ನನ್ನು ಬಿಹಾರದ ಪಶ್ಚಿಮ ಚಂಪಾರಣ ಜಿಲ್ಲೆಯ ಚನ್ಪಾಟಿಯಾ ಪ್ರದೇಶದಲ್ಲಿ ಬಂಧಿಸಿ ಹೈದರಾಬಾದ್‌ಗೆ ಕರೆತರಲಾಗಿದೆ. ಪತಿ ಅನಿಲ್ ಕುಮಾರ್ ಸಾಹ್‌ನನ್ನೂ ಬಂಧಿಸಲಾಗಿದೆ. ಉಳಿದ ಆರೋಪಿಗಳಾದ ರಿಂಕು ಮತ್ತು ನೀರಜ್ ಬಂಧನಕ್ಕಾಗಿ ಪೊಲೀಸರು ತೀವ್ರ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ರಿಂಕು ವಿರುದ್ಧ ಗಾಂಜಾ ಮತ್ತು ಮದ್ಯ ಕಳ್ಳಸಾಗಣೆ, ಅಪಹರಣ ಸೇರಿದಂತೆ ಹಲವು ಅಪರಾಧ ಪ್ರಕರಣಗಳು ದಾಖಲಾಗಿವೆ. ನೀರಜ್ ವಿರುದ್ಧವೂ ಬಿಹಾರದಲ್ಲಿ ಏಳು ಪ್ರಕರಣಗಳಿದ್ದು, ಸ್ಥಳೀಯವಾಗಿ ಡಿಜೆ ಸೇವೆಗಳನ್ನು ಒದಗಿಸುವ ಮೂಲಕ ಜೀವನ ಸಾಗಿಸುತ್ತಿದ್ದ ಎಂದು ತಿಳಿದು ಬಂದಿದೆ.











