ಬೆಂಗಳೂರು: ದೆಹಲಿಯಿಂದ ರಾಜಧಾನಿಗೆ ಮರಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡೆ ಹಾಗೂ ರಾಜ್ಯ ರಾಜಕೀಯ ವಲಯದಲ್ಲಿನ ಬೆಳವಣಿಗೆಗಳು ತೀವ್ರ ಕುತೂಹಲ ಕೆರಳಿಸಿವೆ. ದೆಹಲಿಯಿಂದ ವಿಶೇಷ ವಿಮಾನದಲ್ಲಿ ವಾಪಸ್ ಆದ ಬೆನ್ನಲ್ಲೇ ಮುಖ್ಯಮಂತ್ರಿಗಳ ಸರ್ಕಾರಿ ನಿವಾಸ ‘ಕಾವೇರಿ’ಯಲ್ಲಿ ತಡರಾತ್ರಿ ಸಣ್ಣ ಸಭೆ ನಡೆದಿದೆ.

ಮಧ್ಯರಾತ್ರಿ 12 ಗಂಟೆಗೆ ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಿದ್ದರಾಮಯ್ಯನವರನ್ನು ಸಚಿವರಾದ ಕೃಷ್ಣಬೈರೇಗೌಡ ಹಾಗೂ ದಿನೇಶ್ ಗುಂಡೂರಾವ್ ಅವರು ಬರಮಾಡಿಕೊಂಡರು. ನಂತರ ಮುಖ್ಯಮಂತ್ರಿಗಳ ಕಾರಿನಲ್ಲೇ ಸಚಿವ ಜಮೀರ್ ಅಹಮದ್ ಖಾನ್ ಮತ್ತು ಶಾಸಕ ಪೊನ್ನಣ್ಣ ಅವರು ಸಿಎಂ ನಿವಾಸಕ್ಕೆ ಆಗಮಿಸಿದರು.
ಸಿಎಂ ಮನೆಗೆ ಬಂದ ನಂತರ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಎಂ.ಬಿ. ಪಾಟೀಲ್, ಬೈರತಿ ಸುರೇಶ್, ಡಾ. ಎಂ.ಸಿ. ಸುಧಾಕರ್, ಶಾಸಕರಾದ ಅಶೋಕ್ ಪಟ್ಟಣ್ ಹಾಗೂ ರಿಜ್ವಾನ್ ಅರ್ಷದ್ ಸೇರಿದಂತೆ ಹಲವು ಪ್ರಮುಖ ನಾಯಕರು ಆಗಮಿಸಿ ಸಿಎಂ ಜೊತೆ ಕಾವೇರಿ ನಿವಾಸದಲ್ಲಿ ಮಾತುಕತೆ ನಡೆಸಿದರು. ತಡರಾತ್ರಿ ನಡೆದ ಈ ಸಭೆಯ ಬಳಿಕ ನಾಯಕರು ಸಿಎಂ ನಿವಾಸದಿಂದ ನಿರ್ಗಮಿಸಿದರು.
ಈ ಎಲ್ಲಾ ರಾಜಕೀಯ ಬಿಕ್ಕಟ್ಟಿನ ನಡುವೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎರಡು ಅಧಿಕೃತ ಕಾರ್ಯಕ್ರಮಗಳು ನಿಗದಿಯಾಗಿವೆ. ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಪುಣ್ಯಸ್ಮರಣೆ ಅಂಗವಾಗಿ ಕೆಪಿಸಿಸಿ ಕಚೇರಿ ಹಾಗೂ ವಿಧಾನಸೌಧದಲ್ಲಿರುವ ನೆಹರು ಪ್ರತಿಮೆಗೆ ಗೌರವ ಸಲ್ಲಿಸುವ ಕಾರ್ಯಕ್ರಮಗಳು ನಿಗದಿಯಾಗಿವೆ. ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಈ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾರಾ ಅಥವಾ ಮುಂದಿನ ರಾಜಕೀಯ ನಡೆಗಳ ಕುರಿತ ಸಭೆಗಳಲ್ಲೇ ನಿರತರಾಗಲಿದ್ದಾರಾ ಎನ್ನುವುದು ಸದ್ಯದ ಕುತೂಹಲ.