
ರಾಯಚೂರು/ಕಲಬುರಗಿ: ರಾಜ್ಯದ ಹಲವೆಡೆ ಮಳೆರಾಯ ಅಬ್ಬರಿಸಿದ್ದು, ಬಿಸಿಲಿನಿಂದ ತತ್ತರಿಸಿದ ಜನರಿಗೆ ತಂಪೆರೆದಿದ್ದಾನೆ. ಇನ್ನೊಂದೆಡೆ ಹಲವು ಅವಾಂತರಗಳು ಸೃಷ್ಟಿಯಾಗಿವೆ. ರಾಯಚೂರಿನಲ್ಲಿ ಗುಡುಗು, ಸಿಡಿಲು ಸಹಿತ ಭಾರೀ ಮಳೆಯಾಗುತ್ತಿದ್ದು, ಬೆಳಗಿನ ಜಾವದಿಂದ ಬಿಟ್ಟು ಬಿಡದೇ ಸುರಿಯುತ್ತಿದೆ. ಬೀದಿಬದಿ ವ್ಯಾಪಾರಿಗಳು ಮಳೆಯಲ್ಲೇ ತರಕಾರಿ ಮಾರುತ್ತಿದ್ದಾರೆ. ಇದರ ನಡುವೆ ರಾಯಚೂರು ತಾಲೂಕಿನ ಕಡಗಂದೊಡ್ಡಿಯಲ್ಲಿ ರೈತ ವಿರೇಶ್ ಅವರಿಗೆ ಸಿಡಿಲು ಬಡಿದಿದ್ದು, ಗಾಯಗೊಂಡಿದ್ದಾರೆ. ಸದ್ಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಇನ್ನೂ ಕಲಬುರಗಿಯಲ್ಲಿ ಬೆಳಗ್ಗೆಯಿಂದ ಗುಡುಗು, ಸಿಡಿಲು ಸಹಿತ ಮಳೆಯಾಗುತ್ತಿದೆ. ಬಿಸಿಲಿನ ಝಳಕ್ಕೆ ತತ್ತರಿಸಿದ ಜನರಿಗೆ ಮಳೆರಾಯ ತಂಪೆರೆದಿದ್ದಾನೆ. ಇಂದು ಮಧ್ಯಾಹ್ನದವರೆಗೆ ತುಂತುರು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
ಗಡಿನಾಡು ಬೀದರ್‌ನಲ್ಲಿ ತಡರಾತ್ರಿ ಸಿಡಿಲು, ಬಿರುಗಾಳಿ ಸಹಿತ ಭಾರೀ ಮಳೆಯಾಗಿ, ಹಲವು ಅವಾಂತರ ಸೃಷ್ಟಿಯಾಗಿದೆ. ಮಳೆಯ ಅಬ್ಬರಕ್ಕೆ ಜಿಲ್ಲಾ ರಂಗಮಂದಿರ ಬಹುತೇಕ ಜಲಾವೃತವಾಗಿದ್ದು, 2 ಅಡಿಯಷ್ಟು ನೀರು ನಿಂತಿದೆ. ಇನ್ನೂ ಮಳೆಯ ಅಬ್ಬರಕ್ಕೆ ಅಕ್ಕಮಹಾದೇವಿ ಕಾಲೇಜು ಕಾಂಪೌಂಡ್ ಕುಸಿದಿದೆ. ಹುಲಸೂರು ಪಟ್ಟಣದಲ್ಲಿ ಮನೆ ಮೇಲಿದ್ದ ಕಲ್ಲು ಬಿದ್ದು, ಬಾಲಕಿ ಸಾವನ್ನಪ್ಪಿದ್ದಾಳೆ. ಸದ್ಯ ಈಗ ಕೂಡ ಜಿಲ್ಲೆಯಲ್ಲಿ ಅಬ್ಬರದ ಮಳೆ ಪ್ರಾರಂಭವಾಗಿದೆ. ಇಂದು ಜಿಲ್ಲೆಯಲ್ಲಿ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ.










