
ಮಂಗಳೂರು: ನಗರದಲ್ಲಿ ತಡರಾತ್ರಿ ಕರ್ತವ್ಯ ನಿರತರಾಗಿದ್ದ ಪೊಲೀಸ್ ಸಿಬ್ಬಂದಿಯೊಬ್ಬರ ಮೇಲೆ ದ್ವಿಚಕ್ರ ವಾಹನದಲ್ಲಿ ಬಂದ ದುಷ್ಕರ್ಮಿಗಳು ಭೀಕರ ಹಲ್ಲೆ ನಡೆಸಿರುವ ಘಟನೆ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೊಡಿಕಲ್ ಉರ್ವ ಬಳಿಯ ನಾರಾಯಣ ಗುರು ಕೋ-ಆಪರೇಟಿವ್ ಸೊಸೈಟಿ ಬಳಿ ಈ ಕೃತ್ಯ ನಡೆದಿದ್ದು, ಸದ್ಯ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾತ್ರಿ ಸುಮಾರು 2:00 ಗಂಟೆಯ ಸುಮಾರಿಗೆ ಉರ್ವ ಠಾಣೆಯ ಪೊಲೀಸ್ ಸಿಬ್ಬಂದಿ ಎಂದಿನಂತೆ ನೈಟ್ ರೌಂಡ್ಸ್ ಕರ್ತವ್ಯದಲ್ಲಿದ್ದರು. ಈ ವೇಳೆ ಅನುಮಾನಾಸ್ಪದವಾಗಿ ಬಂದ ದ್ವಿಚಕ್ರ ವಾಹನವೊಂದನ್ನು ತಪಾಸಣೆಗಾಗಿ ತಡೆಯಲು ಅವರು ಪ್ರಯತ್ನಿಸಿದ್ದಾರೆ. ಆದರೆ, ವಾಹನದಲ್ಲಿದ್ದ ಕಿಡಿಗೇಡಿಗಳು ಪೊಲೀಸರ ಮುನ್ನೆಚ್ಚರಿಕೆಯನ್ನು ನಿರ್ಲಕ್ಷಿಸಿ, ವಾಹನವನ್ನು ಅತ್ಯಂತ ಬೇಜವಾಬ್ದಾರಿಯಿಂದ ಹಾಗೂ ಅತಿವೇಗವಾಗಿ ಚಲಾಯಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಅಷ್ಟಕ್ಕೇ ನಿಲ್ಲದ ಪುಂಡರ ಉದ್ಧಟತನ, ಕೆಲವೇ ನಿಮಿಷಗಳಲ್ಲಿ ಮತ್ತೆ ಅದೇ ಸ್ಥಳಕ್ಕೆ ಮರಳಿ ಬಂದಿದ್ದಾರೆ. ಈ ವೇಳೆ ಸಿಮೆಂಟ್ ಶೀಟ್‌ನ ತುಂಡೊಂದರಿಂದ ಪೊಲೀಸ್ ಕಾನ್‌ಸ್ಟೆಬಲ್ ಹಲೆಗೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಪೊಲೀಸ್ ಕಾನ್‌ಸ್ಟೆಬಲ್ ಬಾಗಿ ಏಟಿನಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಆದರೂ ಹಲ್ಲೆಯಿಂದ ಅವರ ತಲೆಗೆ ಗಾಯವಾಗಿದೆ ಎಂದು ನಗರದ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ. ಈ ಬಗ್ಗೆ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ , ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ತಲೆಮರೆಸಿಕೊಂಡಿರುವ ಕಿಡಿಗೇಡಿಗಳ ಪತ್ತೆಗೆ ಕ್ರಮಕೈಗೊಂಡಿದ್ದಾರೆ. ನಗರದಲ್ಲಿ ಇತ್ತೀಚೆಗೆ ಪೊಲೀಸರ ಮೇಲೆ ಹಲ್ಲೆಯಾಗುತ್ತಿರುವ ಎರಡನೇ ಪ್ರಕರಣ ಇದಾಗಿದೆ.









