Tuesday, May 26, 2026
ಸುದ್ದಿ

114 ರಫೇಲ್ ಜೆಟ್‌ ಖರೀದಿಗೆ ವಿನಂತಿ ಪತ್ರ ಅಂತಿಮಗೊಳಿಸಿದ ಭಾರತ :ಶೀಘ್ರದಲ್ಲೇ ಫ್ರಾನ್ಸ್‌ಗೆ ಕಳುಹಿಸಲು ನಿರ್ಧಾರ -ಕಹಳೆ ನ್ಯೂಸ್

ನವದೆಹಲಿ/ಪ್ಯಾರಿಸ್‌: ರಫೇಲ್‌ ಯುದ್ಧ ವಿಮಾನಗಳ ಖರೀದಿಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದೆ. ಭಾರತವೂ 114 ರಫೇಲ್‌ ಯುದ್ಧ ವಿಮಾನಗಳ ಖರೀದಿಗಾಗಿ ವಿನಂತಿ ಪತ್ರವನ್ನು  ಅಂತಿಮಗೊಳಿಸಿದ್ದು, ಶೀಘ್ರದಲ್ಲೇ ಫ್ರಾನ್ಸ್‌ಗೆ ಕಳುಹಿಸಲು ನಿರ್ಧರಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಈ 114 ಜೆಟ್‌ಗಳ ಪೈಕಿ 90 ರಫೇಲ್‌ ಜೆಟ್‌ಗಳನ್ನು ಡಸಾಲ್ಟ್ ಏವಿಯೇಷನ್ ​​ಮತ್ತು ಭಾರತೀಯ ಕಂಪನಿಯ ಸಹಯೋಗದಲ್ಲಿ ಭಾರತದಲ್ಲೇ ತಯಾರಿಸಲಿದೆ. ಫ್ರಾನ್ಸ್‌ (France) ವಿನಂತಿ ಪತ್ರಕ್ಕೆ ಪ್ರತಿಕ್ರಿಯಿಸಿದ ಕೂಡಲೇ ಭಾರತವು ಜೆಟ್‌ಗಳ ಸ್ವಾಧೀನಕ್ಕಾಗಿ ಪ್ರಸ್ತಾವನೆಯನ್ನು (RFP) ಔಪಚಾರಿಕಗೊಳಿಸಲಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ವಿನಂತಿ ಪತ್ರ (LoR) ಎನ್ನುವುದು ವಿದೇಶಿ ಮಿಲಿಟರಿ ಉತ್ಪನ್ನಗಳ ಮಾರಾಟ (FMS) ಅಥವಾ ಅಂತರ ಸರ್ಕಾರಿ ಒಪ್ಪಂದ (IGA)ಗಳ ಅಡಿಯಲ್ಲಿ ಉತ್ಪನ್ನಗಳನ್ನ ಖರೀದಿಸಲು ಒಂದು ದೇಶದ ಸರ್ಕಾರ ಮತ್ತೊಂದು ದೇಶದ ಸರ್ಕಾರಕ್ಕೆ ಕಳುಹಿಸುವ ಔಪಚಾರಿಕ ದಾಖಲೆಯಾಗಿದೆ. ಇದು ಪ್ರಸ್ತುತ ಆ ದೇಶದ ಸಾಮರ್ಥ್ಯ, ಪ್ರಮಾಣ ಮತ್ತು ತಾಂತ್ರಿಕ ಅವಶ್ಯಕತೆಗಳನ್ನು ವಿವರಿಸುತ್ತದೆ.

ಅಂತಾರಾಷ್ಟ್ರೀಯ ಮಿಲಿಟರಿ ಉತ್ಪನ್ನಗಳ ಖರೀದಿ ವಿಚಾರಕ್ಕೆ ಬಂದಾಗ ರಕ್ಷಣಾ ಸ್ವಾಧೀನ ಮಂಡಳಿ (DAC) ಮೊದಲು ಅನುಮತಿ ನೀಡಬೇಕಾಗುತ್ತದೆ. ಆ ಬಳಿಕ ಖರೀದಿಗಾಗಿ ವಿನಂತಿ ಪತ್ರ (LoR – Letter of Request) ಕಳುಹಿಸಲಾಗುತ್ತದೆ. ಈ ಪತ್ರಕ್ಕೆ ಸಂಬಂಧಪಟ್ಟ ವಿದೇಶಿ ಸರ್ಕಾರ ಪ್ರತಿಕ್ರಿಯೆ ನೀಡಿದ ನಂತರ, ಉತ್ಪನ್ನದ ಬೆಲೆ, ಲಭ್ಯತೆ ಹಾಗೂ ಲಾಜಿಸ್ಟಿಕ್ಸ್‌ ಬೆಂಬಲವನ್ನು ಉಲ್ಲೇಖಿಸಿ ಎರಡೂ ಕಡೆಯ ಅಧಿಕಾರಿಗಳು ಮಾತುಕತೆ ನಡೆಸುತ್ತಾರೆ. ಆದ್ರೆ ಅಂತಿಮ ಒಪ್ಪಂದಕ್ಕೆ ಸಹಿ ಹಾಕುವ ಮೊದಲು ಭದ್ರತೆಗೆ ಸಂಬಂಧಿಸಿದ ಕ್ಯಾಬಿನೆಟ್ ಸಮಿತಿ (CCS) ಅನುಮೋದನೆ ನೀಡಬೇಕಾಗುತ್ತದೆ.

ರಫೇಲ್‌ ಖರೀದಿಸುವ ಡಿಎಸಿ ಪ್ರಸ್ತಾವನೆಯನ್ನು ಅಂತಿಮಗೊಳಿಸಿದ 3 ತಿಂಗಳ ಬಳಿಕ ವಿನಂತಿ ಪತ್ರ ಬಂದಿದೆ. ಮುಂದಿನ ಜೂನ್‌ ತಿಂಗಳಲ್ಲಿ ಪ್ರಧಾನಿ ಮೋದಿ ಫ್ರಾನ್ಸ್‌ಗೆ ಭೇಟಿ ನೀಡಲಿದ್ದಾರೆ. ಅದಕ್ಕೂ ಮುನ್ನ IAF ಮುಖ್ಯಸ್ಥ ವಾಯು ಮುಖ್ಯಸ್ಥ ಮಾರ್ಷಲ್ AP ಸಿಂಗ್ ಫ್ರಾನ್ಸ್‌ಗೆ ಭೇಟಿ ನೀಡಲಿದ್ದಾರೆ. ಇದೇ ವೇಳೆ ರಫೇಲ್‌ ಖರೀದಿ ಬಗ್ಗೆ ಮಾತುಕತೆಗಳು ಅಂತಿಮಗೊಳ್ಳುವ ಸಾಧ್ಯತೆಯಿದೆ.

2026 ವರ್ಷಾರಂಭದಲ್ಲಿ ಅಂದ್ರೆ ಫೆಬ್ರವರಿಯಲ್ಲಿ ದೇಶದ ರಕ್ಷಣಾ ಪಡೆಗಳ ಸನ್ನದ್ಧತೆ ವೃದ್ಧಿಸುವ ನಿಟ್ಟಿನಲ್ಲಿ ಭಾರತ ರಕ್ಷಣಾ ಸಚಿವಾಲಯ 114 ರಫೇಲ್‌ ಯುದ್ಧ ವಿಮಾನಗಳ ಖರೀದಿಗೆ ಅನುಮೋದನೆ ನೀಡಿತ್ತು. ಆದ್ರೆ ಯುದ್ಧ ವಿಮಾನಗಳ ಖರೀದಿಗೆ ತಗುಲುವ ವೆಚ್ಚದ ಕುರಿತು ರಕ್ಷಣಾ ಸಚಿವಾಲಯ ಮಾಹಿತಿ ನೀಡಿಲ್ಲ. ಇವುಗಳಿಗೆ ತಗುಲುವ ವೆಚ್ಚ 2.90 ಲಕ್ಷ ಕೋಟಿಯಿಂದ 3.15 ಲಕ್ಷ ಕೋಟಿ ರೂ.ವೆರೆಗೆ ಇರಲಿದೆ ಎಂದು ಅಂದಾಜಿಸಲಾಗಿದೆ.

ಭಾರತೀಯ ವಾಯುಪಡೆಯು ಈ ಹಿಂದೆ 6 ಸ್ಕ್ಯಾಡ್ರನ್‌ಗಳಿಗೆ ಮಿಗ್ ಯುದ್ಧವಿಮಾನಗಳ ಬದಲು ಮಧ್ಯಮ ಹಾಗೂ ಬಹುಕಾರ್ಯ ಯುದ್ಧವಿಮಾನಗಳನ್ನು (MMRA) ಸೇರ್ಪಡೆ ಮಾಡುವುದಕ್ಕೆ 25 ವರ್ಷಗಳ ಹಿಂದೆ ಪ್ರಕ್ರಿಯೆ ಆರಂಭಿಸಿತ್ತು. ರಾಜಕೀಯ ಜಟಾಪಟಿಯಿಂದಾಗಿ ಇದು ಕಾರ್ಯಗತವಾಗಿರಲಿಲ್ಲ. ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರವು ತನ್ನ 10 ವರ್ಷಗಳ ಅಧಿಕಾರಾವಧಿಯಲ್ಲಿ ವಿವಿಧ ಸಾಮರ್ಥ್ಯದ ಯುದ್ಧವಿಮಾನಗಳ ಖರೀದಿಯನ್ನು ಅಂತಿಮಗೊಳಿಸಿರಲಿಲ್ಲ. ಆದರೆ, ಜಾಗತಿಕ ಟೆಂಡರ್ ಮೂಲಕ ರಫೇಲ್ ಯುದ್ಧವಿಮಾನಗಳ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಿತ್ತು. 2015ರಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ಎಂಎಂಆರ್‌ಸಿಎ ಖರೀದಿಗೆ ಕರೆದಿದ್ದ ಟೆಂಡರ್‌ಅನ್ನು ರದ್ದು ಮಾಡಿತ್ತು. 2016ರಲ್ಲಿ 36 ರಫೇಲ್ ಯುದ್ಧವಿಮಾನಗಳನ್ನು ಖರೀದಿಸಿತ್ತು.

ರಫೇಲ್‌ ಡೀಲ್‌ ಪ್ರಮುಖ ಅಂಶಗಳು
* ಇದು ಭಾರತ ಮತ್ತು ಫ್ರಾನ್ಸ್ ಸರ್ಕಾರಗಳ ನಡುವಿನ ಖರೀದಿ ಒಪ್ಪಂದವಾಗಿದೆ. ಯುದ್ಧವಿಮಾನಗಳ ದರ ಹಾಗೂ ಇತರ ಶಸ್ತ್ರಾಸ್ತ್ರಗಳ ಕುರಿತು ಡಸಾಲ್ಟ್‌ ಏವಿಯೇಷನ್ ಹಾಗೂ ರಕ್ಷಣಾ ಸಚಿವಾಲಯದ ನಡುವೆ ಮಾತುಕತೆ ನಡೆಯಬೇಕಿದೆ.
* ಈ ಖರೀದಿ ಕಾರ್ಯಕ್ರಮದಡಿ ಸುಮಾರು 90 ಯುದ್ಧ ವಿಮಾನಗಳು ಭಾರತದಲ್ಲಿ ತಯಾರಾಗಲಿವೆ, ಉಳಿದ ರಫೇಲ್ ಯುದ್ಧವಿಮಾನಗಳನ್ನು ಹಾಸೊ ಏವಿಯೇಷನ್ ಪೂರೈಕೆ ಮಾಡಲಿದೆ.
* 114 ಯುದ್ಧವಿಮಾನಗಳ ಪೈಕಿ 88 ಸಿಂಗಲ್ ಸೀಟರ್ ಹಾಗೂ 26 ಡಬಲ್‌ ಸೀಟರ್ ಆವೃತ್ತಿಯ ರಫೇಲ್ ಇರಲಿವೆ
* ಭಾರತೀಯ ವಾಯುಪಡೆಗೆ ಮಂಜೂರಾದ ಯುದ್ಧವಿಮಾನಗಳ ಸ್ಕ್ಯಾಡ್ರನ್‌ಗಳ ಸಂಖ್ಯೆ 42. ಈಗ ಅವುಗಳ ಸಂಖ್ಯೆ 31ಕ್ಕೆ ಇಳಿದಿದೆ. ಈ ಸಂದರ್ಭದಲ್ಲಿ ರಫೇಲ್ ಖರೀದಿಗೆ ಮುಂದಾಗಿರುವುದು ಗಮನಾರ್ಹ. ಒಂದು ಸ್ಕ್ಯಾಡ್ರನ್ 16-18 ಯುದ್ಧವಿಮಾನಗಳನ್ನು ಒಳಗೊಂಡಿರುತ್ತದೆ.