ಮೆಲ್ಕಾರ್ ರಸ್ತೆ ದಾಟುತ್ತಿದ್ದ ವೇಳೆ ಕಾರು ಡಿಕ್ಕಿ: ಹತ್ತಡಿ ದೂರಕ್ಕೆ ಹಾರಿ ಬಿದ್ದ ಮಹಿಳೆ, ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ- ಕಹಳೆ ನ್ಯೂಸ್

ಮಂಗಳೂರು: ರಸ್ತೆ ದಾಟುತ್ತಿದ್ದ ವೇಳೆ ಮಹಿಳೆಯೋರ್ವರಿಗೆ ಕಾರು ಡಿಕ್ಕಿಯಾಗಿದ್ದು ಡಿಕ್ಕಿಯ ರಭಸಕ್ಕೆ ಮಹಿಳೆ ದೂರಕ್ಕೆ ಹಾರಿ ಬಿದ್ದ ಘಟನೆಯ ದೃಶ್ಯ ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಬಂಟ್ವಾಳ ತಾಲೂಕಿನ ಸಜಿಪಮುನ್ನೂರು ಗ್ರಾಮದ ದಾಸರಗುಡ್ಡೆ ಎಂಬಲ್ಲಿ ಘಟನೆ ನಡೆದಿದ್ದು ಗಂಭೀರ ಗಾಯಗೊಂಡ ಮಹಿಳೆಯನ್ನು ಉಳ್ಳಾಲ ತಾಲೂಕಿನ ಬೋಳಿಯಾರು ಗ್ರಾಮದ ಭಾರತಿ (48) ಎಂದು ಗುರುತಿಸಲಾಗಿದೆ.
ಭಾರತಿ ಅವರು ತನ್ನ ಮಗಳು ದೀಪಶ್ರೀ ಎಂಬವರೊಂದಿಗೆ ಗುಳಿಗಜ್ಜ ಕಟ್ಟೆಗೆ ಕಾಣಿಕೆ ಹಾಕಲೆಂದು ಸಜಿಪಮೂಡಕ್ಕೆ ಬಂದಿದ್ದರು. ಈ ವೇಳೆ, ಮೆಲ್ಕಾರ್- ಮುಡಿಪು ರಾಜ್ಯ ಹೆದ್ದಾರಿ ರಸ್ತೆಯನ್ನು ದಾಟಲು ಯತ್ನಿಸುತ್ತಿದ್ದಾಗ ಮೆಲ್ಕಾರ್ ಕಡೆಯಿಂದ ಮುಡಿಪುಗೆ ತೆರಳುತ್ತಿದ್ದ ಕಾರು ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿದೆ.
ಗಾಯಗೊಂಡ ಮಹಿಳೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಂಟ್ವಾಳ ಸಂಚಾರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರು ಡಿಕ್ಕಿಯಾದ ರಭಸಕ್ಕೆ ಮಹಿಳೆ ದೂರಕ್ಕೆ ಹಾರಿ ಬಿದ್ದಿದ್ದಾರೆ.









