
ನವದೆಹಲಿ: ಫೆ.26 ರಂದು ರಾಜಸ್ಥಾನದ ಉದಯಪುರದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ನವಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ, ಈಗ ದೆಹಲಿಯಲ್ಲಿ ಗಣ್ಯರ ಭೇಟಿಯಲ್ಲಿ ಬ್ಯುಸಿಯಾಗಿದ್ದಾರೆ. ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅವರನ್ನು ಭೇಟಿಯಾದ ಈ ಜೋಡಿಯು, ಮಾರ್ಚ್ 4 ರಂದು ಹೈದರಾಬಾದ್‌ನಲ್ಲಿ ನಡೆಯಲಿರುವ ತಮ್ಮ ಅದ್ದೂರಿ ರಿಸೆಪ್ಶನ್ ಗೆ ಅಧಿಕೃತವಾಗಿ ಆಮಂತ್ರಿಸಿದ್ದಾರೆ.
ಮೋದಿ-ವಿರೋಶ್ ಭೇಟಿ:
ಪ್ರಧಾನಿ ಮೋದಿಯವರಿಗೆ ಸಾಂಪ್ರದಾಯಿಕ ಶಾಲು ಹೊದಿಸಿ ವಿಜಯ್ ಮತ್ತು ರಶ್ಮಿಕಾ ಗೌರವ ಸಲ್ಲಿಸಿದರು.ಭೇಟಿಯ ವೇಳೆ ರಶ್ಮಿಕಾ ಹಳದಿ ಬಣ್ಣದ ಸಾಂಪ್ರದಾಯಿಕ ಚೂಡಿದಾರ್ ಧರಿಸಿದ್ದರೆ, ವಿಜಯ್ ಸಂಪೂರ್ಣ ಬಿಳಿ ಬಣ್ಣದ ಕುರ್ತಾ-ಪೈಜಾಮಾದಲ್ಲಿ ಕಂಗೊಳಿಸುತ್ತಿದ್ದರು.
ಅಮಿತ್ ಶಾ ಭೇಟಿ: ಪ್ರಧಾನಿ ಭೇಟಿಗೂ ಮುನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದ ಜೋಡಿಯು, ಬೆಳ್ಳಿ ಗಣೇಶನ ವಿಗ್ರಹ ನೀಡಿ ಆಮಂತ್ರಣ ಪತ್ರಿಕೆ ಹಸ್ತಾಂತರಿಸಿದ್ದರು.
ಈ ವಿವಾಹದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ವಿಶೇಷ ಪತ್ರ ಬರೆದು ಶುಭ ಕೋರಿದ್ದಾರೆ. “ವಿಜಯ್ ಮತ್ತು ರಶ್ಮಿಕಾ ಇಬ್ಬರಿಗೂ ಸಿನಿಮಾ ಸ್ಕ್ರಿಪ್ಟ್‌ಗಳು ಹೊಸದಲ್ಲ. ಆದರೆ ಪ್ರೀತಿ ಮತ್ತು ಅನುರಾಗದಿಂದ ಕೂಡಿದ ಇವರ ಜೀವನದ ಈ ‘ದೈವಿಕ ಸ್ಕ್ರಿಪ್ಟ್’ , ಬೆಳ್ಳಿತೆರೆಯ ಮ್ಯಾಜಿಕ್‌ಗಿಂತಲೂ ಹೆಚ್ಚು ಹೊಳೆಯಲಿ” ಎಂದು ಪ್ರಧಾನಿ ಮೋದಿ ಹಾರೈಸಿದ್ದಾರೆ.












