Recent Posts

Saturday, September 12, 2026
ದಕ್ಷಿಣ ಕನ್ನಡಪುತ್ತೂರುಸುದ್ದಿ

ಹೈಕೋರ್ಟ್ ನಿರ್ದೇಶನ : ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮರು ರಚನೆ: ಅಧ್ಯಕ್ಷರಾಗಿ ಪಂಜಿಗುಡ್ಡೆ ಈಶ್ವರ ಭಟ್, ಹಳೇ ಸದಸ್ಯರೇ ಮತ್ತೆ ಮೂರು ವರ್ಷಗಳ ಅವಧಿಗೆ ಪುನರಾಯ್ಕೆ -ಕಹಳೆನ್ಯೂಸ್

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಹೈಕೋರ್ಟ್ ನಿರ್ದೇಶನದ ಮೇರೆಗೆ ರಾಜ್ಯ ಧಾರ್ಮಿಕ ಪರಿಷತ್ ಹೊಸ ವ್ಯವಸ್ಥಾಪನಾ ಸಮಿತಿಯನ್ನು ರಚಿಸಿದ್ದು, ಹಾಲಿ ಸಮಿತಿಯವರೇ ಮತ್ತೆ ಆಯ್ಕೆಯಾಗಿದ್ದಾರೆ. ಈಶ್ವರ ಭಟ್ ಪಂಜಿಗುಡ್ಡೆ ಅವರು ಸಮಿತಿಯ ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದಾರೆ.

ಜಾಹೀರಾತು

ಹೈಕೋರ್ಟ್ ಆದೇಶದ ಹಿನ್ನೆಲೆ:
ಈ ಹಿಂದಿನ ಸಮಿತಿ ರಚನೆ ಕ್ರಮಬದ್ಧವಾಗಿಲ್ಲ ಎಂದು ಬನ್ನೂರು ಗ್ರಾಮದ ವಸಂತಿ ಯಾನೆ ವಸಂತಲಕ್ಷ್ಮೀ ಎಂಬುವರು ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಸಮಿತಿ ರಚನೆಯಲ್ಲಿನ ತಾಂತ್ರಿಕ ಕಾರಣಗಳನ್ನು ಪರಿಗಣಿಸಿದ ಹೈಕೋರ್ಟ್, ಹಾಲಿ ಸಮಿತಿಯನ್ನು ರದ್ದುಪಡಿಸಿ 8 ವಾರಗಳ ಒಳಗಾಗಿ ಹೊಸ ಸಮಿತಿ ರಚಿಸುವಂತೆ ರಾಜ್ಯ ಧಾರ್ಮಿಕ ಪರಿಷತ್ಗೆ ನಿರ್ದೇಶನ ನೀಡಿತ್ತು. ದೇವಸ್ಥಾನದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯಾಗಬಾರದು ಎಂಬ ಮನವಿಯನ್ನು ಪುರಸ್ಕರಿಸಿದ ನ್ಯಾಯಪೀಠ, ಹೊಸ ಸಮಿತಿ ರಚನೆಯಾಗುವವರೆಗೂ ಹಾಲಿ ಸಮಿತಿಯು ಮುಂದುವರಿಯಲು ಅವಕಾಶ ನೀಡಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ನೂತನ ಸಮಿತಿ ರಚನೆ:
ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ಕಾಯ್ದೆ 1997ರ ಸೆಕ್ಷನ್ 25ರ ಅಡಿಯಲ್ಲಿ ರಾಜ್ಯ ಧಾರ್ಮಿಕ ಪರಿಷತ್, 9 ಸದಸ್ಯರನ್ನು ಒಳಗೊಂಡ ವ್ಯವಸ್ಥಾಪನಾ ಸಮಿತಿಯನ್ನು ರಚಿಸಿ ಆದೇಶ ಹೊರಡಿಸಿದೆ. ಸೆಪ್ಟೆಂಬರ್ 19ರಂದು ನಡೆದ ರಾಜ್ಯ ಧಾರ್ಮಿಕ ಪರಿಷತ್ತಿನ ಸಭೆಯಲ್ಲಿ ಈ ಬಗ್ಗೆ ಸರ್ವಾನುಮತದಿಂದ ತೀರ್ಮಾನ ಕೈಗೊಳ್ಳಲಾಗಿತ್ತು. ಡಿಸೆಂಬರ್ 5ರಂದು ಆದೇಶ ಹೊರಡಿಸಲಾಗಿದ್ದು, ಈ ಆದೇಶದ ದಿನಾಂಕದಿಂದ ಮೂರು ವರ್ಷಗಳ ಅವಧಿಗೆ ಸಮಿತಿ ಕಾರ್ಯನಿರ್ವಹಿಸಲಿದೆ.

ಸದಸ್ಯರು ಮತ್ತು ಅಧ್ಯಕ್ಷರ ಆಯ್ಕೆ:
ಈಶ್ವರ ಭಟ್ ಪಂಜಿಗುಡ್ಡೆ, ಬಿ.ಈಶ್ವರ ನಾಯ್ಕ ಸಾಮೆತ್ತಡ್ಕ, ಕೃಷ್ಣವೇಣಿ ಮಂಜಲ್ಪಡ್ಡು, ನಳಿನಿ ಪಿ.ಶೆಟ್ಟಿ, ದಿನೇಶ್ ಕುಲಾಲ್ ಪಿ.ವಿ, ಮಹಾಬಲ ರೈ ವಳತ್ತಡ್ಕ, ಸುಭಾಶ್ ರೈ ಕಲ್ಲಿಮಾರು, ವಿನಯ ಕುಮಾರ್ ಮುಗೇರಡ್ಕ ಮತ್ತು ದೇವಸ್ಥಾನದ ಪ್ರಧಾನ ಅರ್ಚಕ (ವಸಂತ ಕೆದಿಲಾಯ) ಅವರು ಸಮಿತಿ ಸದಸ್ಯರಾಗಿ ಮುಂದುವರಿದಿದ್ದಾರೆ. ಸಮಿತಿ ಸದಸ್ಯರು ಸಭೆ ಸೇರಿ ಈಶ್ವರ ಭಟ್ ಪಂಜಿಗುಡ್ಡೆ ಅವರನ್ನು ಅಧ್ಯಕ್ಷರಾಗಿ ಮರು ಆಯ್ಕೆ ಮಾಡಿದ್ದಾರೆ.

ವೈಯಕ್ತಿಕ ವಿವಾದದಿಂದ ರಿಟ್ ಅರ್ಜಿ:
ಅರ್ಜಿದಾರರಾದ ವಸಂತಿ ಯಾನೆ ವಸಂತಲಕ್ಷ್ಮೀ ಅವರು ದೇವಸ್ಥಾನದ ಸಮಿತಿಗೆ ಅರ್ಜಿದಾರರಾಗಿರಲಿಲ್ಲ. ಪಂಜಿಗುಡ್ಡೆ ಈಶ್ವರ ಭಟ್ ಅವರೊಂದಿಗಿನ ವೈಯಕ್ತಿಕ ವಿವಾದದಿಂದಾಗಿ ಈ ರಿಟ್ ಅರ್ಜಿ ಸಲ್ಲಿಸಿದ್ದಾರೆ ಎಂದು ನ್ಯಾಯಪೀಠಕ್ಕೆ ಗಮನ ಸೆಳೆಯಲಾಗಿತ್ತು. ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಹಂಚಿಕೆಯಾಗಿರುವ ಹಿನ್ನೆಲೆಯಲ್ಲಿ, ಸಮಿತಿ ರದ್ದುಗೊಳಿಸಿದರೆ ಸಮಸ್ಯೆ ಆಗುತ್ತದೆ ಎಂದು ಸಮಿತಿಯ ಪರ ವಕೀಲರು ವಾದಿಸಿದ್ದರು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಷರತ್ತುಬದ್ಧ ಆದೇಶ ನೀಡಿತ್ತು.

ಹೊಸ ಸಮಿತಿ ರಚನೆಯೊಂದಿಗೆ, ಈ ಹಿಂದೆ 2024ರ ಡಿಸೆಂಬರ್ 18ರಂದು ಅಧಿಕಾರ ಸ್ವೀಕರಿಸಿದ್ದ ಸಮಿತಿಯವರೇ ಮತ್ತೆ ಮೂರು ವರ್ಷಗಳ ಅವಧಿಗೆ ಆಯ್ಕೆಯಾಗಿದ್ದಾರೆ.