
ಮಲಪ್ಪುರಂ: ಶಬರಿಮಲೆಗೆ ಹೋಗಿ ಅಯ್ಯಪ್ಪಸ್ವಾಮಿಯ ದರ್ಶನ ಮಾಡಲು ತಮಗೂ ಹಕ್ಕಿದೆ ಎಂದು ಸುದ್ದಿಗೋಷ್ಠಿ ನಡೆಸಿದ್ದ ಮೂವರು ಮಹಿಳೆಯರಿಗೆ ಬೆಂಬಲ ನೀಡಿದ್ದ ಮಲಪ್ಪುರಂನ 33 ವರ್ಷದ ಸಂಗೀತ್ ಮೇಲೆ 30 ಜನ ದಾಳಿ ನಡೆಸಿದ್ದಾರೆ.
ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಬೆಂಬಲ ಸೂಚಿಸಿದ್ದ ವ್ಯಕ್ತಿಯ ಮೇಲೆ 30 ಜನರು ಹಲ್ಲೆ ನಡೆಸಿರುವ ಘಟನೆ ಮಲಪ್ಪುರಂನ ನೀಲಾಂಬುರ್ನಲ್ಲಿ ನಡೆದಿದೆ.
ನವೆಂಬರ್ 19ರಂದು ಎರ್ನಾಕುಲಂ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಮಹಿಳೆಯರೊಂದಿಗೆ ಸಂಗೀತ್ ಕೂಡ ಭಾಗವಹಿಸಿದ್ದರು. ನವೆಂಬರ್ 27ಕ್ಕೆ ಅವರು ಮಲಪ್ಪುರಂನ ತಮ್ಮ ಮನೆಗೆ ವಾಪಾಸಾಗಿದ್ದು, ಆ ಸಂದರ್ಭದಲ್ಲಿ ಗುಂಪು ಕಟ್ಟಿಕೊಂಡು ಬಂದ ಹಲ್ಲೆ ನಡೆಸಲಾಗಿದೆ.
ಅಂದು ಮಧ್ಯರಾತ್ರಿ ನನ್ನ ಸ್ನೇಹಿತರೊಂದಿಗೆ ಮನೆಗೆ ಬರುತ್ತಿದ್ದಾಗ ರಸ್ತೆಯಲ್ಲಿ ಅಡ್ಡಹಾಕಿದ ಎಬಿವಿಪಿಯ ಕೆಲವರು ನನ್ನ ಹೆಸರು ಸಂಗೀತ್ ಹೌದೋ ಅಲ್ಲವೋ ಎಂದು ಕೇಳಿದರು. ನಾನು ನನ್ನ ಹೆಸರು ಹೇಳುತ್ತಿದ್ದಂತೆ ಬೇರೇನೂ ಹೇಳದೆ ಹೊಡೆಯಲಾರಂಭಿಸಿದರು. ಆ ಗುಂಪಿನಲ್ಲಿದ್ದ ಕೆಲವರನ್ನು ನಾನು ಎಬಿವಿಪಿ ಸಂಘಟನೆಯಲ್ಲಿ ನೋಡಿದ್ದರಿಂದ ಅವರ ಮೇಲೆ ಪೊಲೀಸರಿಗೆ ದೂರು ನೀಡಿದ್ದೇವೆ ಎಂದು ಸಂಗೀತ್ ಹೇಳಿದ್ದಾರೆ.
ಸಂಗೀತ್ ಅವರ ತಲೆಗೆ ಗಾಯಗಳಾಗಿದ್ದು, ಅಲ್ಲಿನ ಸ್ಥಳೀಯರು ಕಿಡಿಗೇಡಿಕಗಳನ್ನು ಓಡಿಸಿದ್ದರಿಂದ ಹೆಚ್ಚಿನ ಅಪಾಯವೇನೂ ಸಂಭವಿಸಿಲ್ಲ. ಅವರನ್ನು ನೀಲಂಬೂರ್ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿದೆ. ಸದ್ಯಕ್ಕೆ ಸಂಗೀತ್ ಅವರ ಸ್ನೇಹಿತರ ಮನೆಯಲ್ಲಿ ವಾಸವಾಗಿದ್ದಾರೆ. ಕಿಡಿಗೇಡಿಗಳು ಮತ್ತೆ ಹಲ್ಲೆ ನಡೆಸುವ ಸಾಧ್ಯತೆ ಇರುವುದರಿಂದ ಆಫೀಸಿಗೆ ಹೋಗುತ್ತಿಲ್ಲ.









