Sunday, July 26, 2026
ಸುದ್ದಿ

ಫಿಲೋಮಿನಾ ಎನ್ನೆಸ್ಸೆಸ್ ಶಿಬಿರದಲ್ಲಿ ‘ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಾಮಾನ್ಯ ಜ್ಞಾನದ ಪಾತ್ರ’- ಕಹಳೆ ನ್ಯೂಸ್

ಪುತ್ತೂರು: ಇಂದಿನ ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಬದುಕಬೇಕಾದರೆ ಸಾಮಾನ್ಯ ಜ್ಞಾನದ ಅಗತ್ಯ ಬಹಳಷ್ಟಿದೆ. ವಿದ್ಯಾರ್ಥಿಗಳು ಭವಿಷ್ಯದ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಲು ಪ್ರಚಲಿತ ವಿದ್ಯಮಾನಗಳ ಕುರಿತು ಸಾಕಷ್ಟು ಅರಿವನ್ನು ಹೊಂದಿರಬೇಕು ಎಂದು ಸಂತ ಫಿಲೋಮಿನಾ ಕಾಲೇಜಿನ ವಾಣಿಜ್ಯಶಾಸ್ತ್ರ ವಿಬಾಗದ ಸಹಾಯಕ ಪ್ರಾಧ್ಯಾಪಕ ತೇಜಸ್ವಿ ಭಟ್ ಕೆ ಹೇಳಿದರು.
ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಪುತ್ತೂರು ತಾಲೂಕಿನ ದ.ಕ.ಜಿ.ಪ ಉ.ಹಿ.ಪ್ರಾ ಶಾಲೆ ಕುರಿಯದಲ್ಲಿ ನಡೆಯುತ್ತಿರುವ ಒಂದು ವಾರದ ವಾರ್ಷಿಕ ವಿಶೇಷ ಶಿಬಿರದ ೫ನೆಯ ದಿನದ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ‘ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಾಮಾನ್ಯ ಜ್ಞಾನದ ಪಾತ್ರ’ ಕುರಿತು ತರಬೇತಿ ನೀಡಿದರು. ಓದುವ ಹವ್ಯಾಸ ಬೆಳೆಸಿಕೊಳ್ಳುವುದು, ಭಾಷಾ ಪ್ರಾವಿಣ್ಯತೆಯನ್ನು ಹೊಂದುವುದು, ಮಾತನಾಡುವ ಕಲೆಯನ್ನು ಹೆಚ್ಚಿಸಿಕೊಳ್ಳುವುದು, ಚರ್ಚೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು ಮೊದಲಾದವುಗಳು ಸಾಮಾನ್ಯ ಜ್ಞಾನ ಗಳಿಕೆಗೆ ಸಹಕಾರಿ ಎಂದು ಹೇಳಿ, ಶಿಬಿರಾರ್ಥಿಗಳನ್ನು ವಿವಿಧ ಗುಂಪುಗಳಲ್ಲಿ ವಿಂಗಡಿಸಿ, ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಿಕೊಟ್ಟರು.

ಅಧ್ಯಕ್ಷತೆ ವಹಿಸಿದ ಶಾಲಾ ವಾರ್ಷಿಕೋತ್ಸವ ಸಮಿತಿಯ ಉಪಾಧ್ಯಕ್ಷ ವಿಜಯಹರಿ ರೈ ಬಳ್ಳಮಜಲು ಮಾತನಾಡಿ, ಎನ್ನೆಸ್ಸೆಸ್ ಶಿಬಿರವು ಸ್ವಯಂಸೇವಕರಲ್ಲಿ ಅಂತರ್ಗತವಾಗಿರುವ ಪ್ರತಿಭೆಗಳನ್ನು ಹೊರಸೂಸಲು ಸಹಾಯ ಮಾಡುತ್ತದೆ. ಶಿಬಿರದಲ್ಲಿ ಗಳಿಸಿದ ಉತ್ತಮ ಅನುಭವಗಳನ್ನು ತಮ್ಮ ಮುಂದಿನ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕುರಿಯ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ದೇರಣ್ಣ ಗೌಡ ಪರೆಂಕಿಲ, ಶಾಲಾ ಸಹಶಿಕ್ಷಕ ನವೀನ್ ಕುಮಾರ್, ಎಸ್‌ಡಿಎಮ್‌ಸಿ ಸದಸ್ಯರಾದ ಶೇಖರ ಪೂಜಾರಿ, ಶೋಭಾ ಯು ರೈ ಮತ್ತು ಬೀಫಾತಿಮ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಹಾಗೂ ಶಿಬಿರಾಧಿಕಾರಿಗಳಾದ ದಿನಕರ ಅಂಚನ್ ಮತ್ತು ಶಶಿಪ್ರಭಾ ಬಿ ಸಹಕರಿಸಿದರು.

ಮುಂಜಾನೆ ಎನ್ನೆಸ್ಸೆಸ್‌ನ ಹಿರಿಯ ಸ್ವಯಂಸೇವಕ, ತೃತೀಯ ಬಿಕಾಮ್ ವಿದ್ಯಾರ್ಥಿ ಸುಶಾಂತ್ ಕೆ ಧ್ವಜಾರೋಹಣ ಮಾಡಿ, ಶುಭ ಹಾರೈಸಿದರು.

ಶಿಬಿರಾರ್ಥಿ ಅವನೀಶ್ ಸ್ವಾಗತಿಸಿ, ಗೌತಮಿ ವಂದಿಸಿದರು. ಕೃತಿಕಾ ಕಾರ್ಯಕ್ರಮ ನಿರೂಪಿಸಿದರು.