
ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ಡೀನ್ ಪ್ರೊ. ಮ್ಯಾಕ್ಸಿಂ ಕಾರ್ಲ್ ತಮ್ಮ 36 ವರ್ಷಗಳ ಸೇವೆಯ ಬಳಿಕ ಡಿಸೆಂಬರ್ 31ರಂದು ವಯೋನಿವೃತ್ತಿಹೊಂದುತ್ತಿದ್ದಾರೆ.
ಇವರು ಶೈಕ್ಷಣಿಕ ವರ್ಷ 1984ರಲ್ಲಿ ಮಡಂತ್ಯಾರಿನ ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿ ಜೀವನವನ್ನು ಆರಂಭಿಸಿ, 2004ರ ತನಕದ 20 ವರ್ಷಗಳ ಕಾಲಾವಧಿಯಲ್ಲಿ ವಿಭಾಗ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿರುತ್ತಾರೆ. ಈ ಅವಧಿಯಲ್ಲಿ ಒಂದು ವರ್ಷಗಳ ಕಾಲ ಕಾಲೇಜಿನ ಪ್ರಭಾರ ಪ್ರಾಚಾರ್ಯರಾಗಿಯೂ ಸೇವೆ ಸಲ್ಲಿಸಿರುತ್ತಾರೆ.
ಶೈಕ್ಷಣಿಕ ವರ್ಷ 2004ರಲ್ಲಿ ಸಂತ ಫಿಲೋಮಿನಾ ಕಾಲೇಜಿಗೆ ವರ್ಗಾವಣೆಗೊಂಡಿರುವ ಇವರು ವಾಣಿಜ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಹಾಗೂ ಡೀನ್ ಆಗಿ ನಿರ್ವಹಿಸಿ, ಇದೀಗ ನಿವೃತ್ತಿಯನ್ನು ಹೊಂದುತ್ತಿದ್ದಾರೆ. ಇವರು ಮಂಗಳೂರು ವಿವಿಯ ವಾಣಿಜ್ಯಶಾಸ್ತ್ರ ಸ್ನಾತಕ ಪಠ್ಯಕ್ರಮಗಳಿಗನುಸಾರವಾಗಿ ಫೈನಾನ್ಸಿಯಲ್ ಅಕೌಂಟಿಂಗ್ ಮತ್ತು ಆಡಿಟಿಂಗ್ ವಿಷಯದಲ್ಲಿ ಆರು ಪಠ್ಯ ಪುಸ್ತಕಗಳನ್ನು ರಚಿಸಿರುತ್ತಾರೆ.
ಮಂಗಳೂರು ವಿವಿ ಕಾಲೇಜು ಶಿಕ್ಷಕರ ಸಂಘದಲ್ಲಿ 10 ವರ್ಷಗಳ ಕಾಲ ಸಂತ ಫಿಲೋಮಿನಾ ಕಾಲೇಜಿನ ಶಿಕ್ಷಕರ ಪ್ರತಿನಿಧಿ ಹಾಗೂ ಮಂಗಳೂರು ವಿವಿಯ ವಾಣಿಜ್ಯಶಾಸ್ತ್ರ ವಿಷಯದ ಪರೀಕ್ಷಾ ಮಂಡಳಿಯಲ್ಲಿ 2 ವರ್ಷಗಳ ಕಾಲಾವಧಿಯಲ್ಲಿ ಸದಸ್ಯರಾಗಿಯೂ ಸೇವೆ ಸಲ್ಲಿಸಿರುತ್ತಾರೆ. ಕಾಲೇಜಿನಲ್ಲಿ ಹಲವಾರು ಮಹತ್ವದ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿರುವ ಇವರು ವಿವಿಧ ಸಮಾಜ ಮುಖಿ ಚಟುವಟಿಕೆಗಳಲ್ಲಿಯೂ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿರುತ್ತಾರೆ.
ಮಡಂತ್ಯಾರು ನಿವಾಸಿಯಾಗಿರುವ ಇವರು ಮಡಂತ್ಯಾರಿನ ಸಮನ್ವಯ ಸಹಕಾರಿ ಸೊಸೈಟಿಯಲ್ಲಿ ಅಧ್ಯಕ್ಷರಾಗಿ 8 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವುದು ಒಂದು ವಿಶೇಷ ಸಾಧನೆಯಾಗಿದೆ ಎಂದು ಕಾಲೇಜಿನ ಪಿಆರ್‍ಒ ಪ್ರಕಟಣೆ ತಿಳಿಸಿದೆ.









