Thursday, May 14, 2026
ಜಿಲ್ಲೆಸುದ್ದಿ

ಮಾದಪ್ಪನ ಭಕ್ತರಿಗೆ ಶಿವರಾತ್ರಿ, ಯುಗಾದಿ ವೇಳೆಯಷ್ಟೇ ಕಾಲ್ನಡಿಗೆ ಬರಲು ಅವಕಾಶ: ಸಚಿವ ಖಂಡ್ರೆ -ಕಹಳೆ ನ್ಯೂಸ್

ಚಾಮರಾಜನಗರ: ಮಹದೇಶ್ವರ ಬೆಟ್ಟದಲ್ಲಿ  ಚಿರತೆ ದಾಳಿಗೆ ಬಾಲಕ ಸಾವು ಪ್ರಕರಣ ಹಿನ್ನೆಲೆ ಅರಣ್ಯ ಇಲಾಖೆ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಇನ್ಮುಂದೆ ಮಾದಪ್ಪನ ಬೆಟ್ಟಕ್ಕೆ ವರ್ಷವಿಡೀ ಪಾದಯಾತ್ರೆಗೆ ನಿಷೇಧ ಹೇರಲಾಗಿದೆ. ಮಹದೇಶ್ವರ ಬೆಟ್ಟಕ್ಕೆ ಯುಗಾದಿ ಮತ್ತು ಶಿವರಾತ್ರಿ ವೇಳೆ ಮಾತ್ರ ಪಾದಯಾತ್ರೆಗೆ ಅವಕಾಶ ಎಂದು ಅರಣ್ಯ ಇಲಾಖೆ ಸಚಿವ ಈಶ್ವರ್​ ಖಂಡ್ರೆ  ಸೂಚನೆ ಕೊಟ್ಟಿದ್ದಾರೆ.

ಮಹದೇಶ್ವರ ಬೆಟ್ಟದಲ್ಲಿ ಚಿರತೆ ದಾಳಿಗೆ ಬಾಲಕ ಬಲಿ ಹಿನ್ನೆಲೆ ಅರಣ್ಯ ಇಲಾಖೆ ಸಚಿವ ಈಶ್ವರ್​ ಖಂಡ್ರೆ ಅವರು ಹಿರಿಯ ಅಧಿಕಾರಿಗಳು ಹಾಗೂ ಚಾಮರಾಜನಗರ ಅರಣ್ಯಾಧಿಕಾರಿಗಳೊಂದಿಗೆ ಇಂದು ವರ್ಚುವಲ್ ಸಭೆ ನಡೆಸಿದರು. ಭಕ್ತರಲ್ಲಿ ವನ್ಯಮೃಗಗಳ ಅಪಾಯದ ಬಗ್ಗೆ ಜಾಗೃತಿ ಮೂಡಿಸಬೇಕು. ಬೆಟ್ಟಕ್ಕೆ ಬಸ್ ಮೂಲಕವೇ ತೆರಳುವಂತೆ ಸೂಚನಾಫಲಕ ಅಳವಡಿಸಬೇಕು. ಬೆಟ್ಟದಿಂದ ನಾಗಮಲೆಗೆ 14 ಕಿ.ಮೀ ಬದಲು ಕೇವಲ 3 ಕಿ.ಮೀ ಪಾದಯಾತ್ರೆಗೆ ಅವಕಾಶ ನೀಡಿ. ವಾಕಿಟಾಕಿ ಮತ್ತು ಅಗತ್ಯ ಸುರಕ್ಷತಾ ಸಲಕರಣೆಗಳೊಂದಿಗೆ ಭದ್ರತಾ ಸಿಬ್ಬಂದಿಯಿಂದ ಪಾದಯಾತ್ರಿಗಳಿಗೆ ರಕ್ಷಣೆ ಒದಗಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಟಿಕೆಟ್ ಕೌಂಟರ್ ಬಳಿಯಿಂದ ನಾಗಮಲೆಗೆ ಜೀಪ್‌ನಲ್ಲಿ ತೆರಳಬೇಕು. ಉಳಿದ 3 ಕಿ.ಮೀ ಮಾತ್ರ ಪಾದಯಾತ್ರೆಗೆ ಅವಕಾಶ ನೀಡಿ ಎಂದು ಸಭೆಯಲ್ಲಿ ಭಾಗಿಯಾಗಿದ್ದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಚಾಮರಾಜನಗರದ ನಾಗಮಲೆ ಅರಣ್ಯದಲ್ಲಿ ಚಿರತೆ ದಾಳಿಗೆ ಬಾಲಕ ಬಲಿ ಪ್ರಕರಣ ಬೆನ್ನಲ್ಲೇ ಅರಣ್ಯ ಇಲಾಖೆಯಿಂದ ಹೊಸ ಸುತ್ತೋಲೆ ಹೊರಡಿಸಿದೆ. ವನ್ಯಜೀವಿ ಸಂಚಾರ ಇರುವ ಎಲ್ಲ ಚಾರಣ ಪಥ ಮತ್ತು ಸಂಚಾರ ಪಥಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಎಂದು ಖಂಡ್ರೆ ಸೂಚನೆ ಹೊರಡಿಸಿದ್ದಾರೆ.

ಸಾರ್ವಜನಿಕರು ಮತ್ತು ಚಾರಣಿಗರ ಸುರಕ್ಷತೆ ದೃಷ್ಟಿಯಿಂದ ಮುಂದಿನ ಆದೇಶದವರೆಗೆ ಚಿರತೆ, ಹುಲಿ, ಆನೆ, ಕರಡಿ ಸೇರಿದಂತೆ ವನ್ಯಜೀವಿಗಳು ಸಂಚರಿಸುವ ಕಡೆ ಮತ್ತು ಮಾನವ-ವನ್ಯಜೀವಿ ಸಂಘರ್ಷ ಸಂಭವಿಸಿರುವ ಕಡೆಗಳಲ್ಲಿ ಚಾರಣ ಮತ್ತು ಸಂಚಾರ ಪಥಗಳನ್ನು ತಕ್ಷಣದಿಂದಲೇ ಸ್ಥಗಿತಗೊಳಿಸಲು ಸೂಚನೆ ನೀಡಲಾಗಿದ್ದು, ಮುಖ್ಯ ವನ್ಯಜೀವಿ ಪರಿಪಾಲಕರಿಂದ ಅಧಿಕೃತ ಸುತ್ತೋಲೆ ಹೊರಡಿಸಿದ್ದಾರೆ.