
ತುಮಕೂರು, ಡಿ.28- ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜ.2ರಂದು ತುಮಕೂರಿಗೆ ಭೇಟಿ ನೀಡಲಿದ್ದು , ಕಾಯಕ ಯೋಗಿ ಡಾ.ಶ್ರೀ ಶಿವಕುಮಾರ ಸ್ವಾಮೀಜಿಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ನಂತರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆಯಲಿರುವ ರೈತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಲಿದ್ದಾರೆ. ಇದೇ ವೇಳೆ ಕೃಷಿ ಸಮ್ಮಾನ್ ಯೋಜನೆಯ 4ನೆ ಕಂತನ್ನು ಬಿಡುಗಡೆ ಮಾಡುವರು.
ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ , ಸಚಿವ ವಿ.ಸೋಮಣ್ಣ ಅವರು ಇಂದು ಸಂಜೆ ನಗರಕ್ಕೆ ಆಗಮಿಸಿದ್ದು , ಪ್ರಧಾನಿ ಕಾರ್ಯಕ್ರಮದ ಪೂರ್ವ ಸಿದ್ಧತಾ ಕಾರ್ಯಗಳನ್ನು ಪರಿಶೀಲಿಸಿದರು. ರೈತ ಸಮಾವೇಶದಲ್ಲಿ ವಿವಿಧ 6 ರಾಜ್ಯಗಳ 40 ಮಂದಿ ಪ್ರಗತಿಪರ ರೈತರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಮಾವೇಶಕ್ಕೆ ಒಂದು ಲಕ್ಷ ರೈತರು ಆಗಮಿಸುವ ಸಾಧ್ಯತೆ ಇದ್ದು , ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ರೈತರಿಗಾಗಿ 1,000 ಕೆಎಸ್‌ಆರ್‌ಟಿಸಿ ಬಸ್‍ಗಳನ್ನು ಕಾಯ್ದಿರಿಸಲಾಗಿದೆ. ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಹಲವಾರು ಸಚಿವರು ಆಗಮಿಸಲಿದ್ದಾರೆ ಎಂದು ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದರು. ಕೃಷಿ ಸಮ್ಮಾನ್ ಯೋಜನೆಯಡಿ ಕೇಂದ್ರ ಸರ್ಕಾರ ಈಗಾಗಲೇ 6 ಸಾವಿರ ರೂ. ನೀಡುತ್ತಿದ್ದು , ಇದರ ಜತೆಗೆ ರಾಜ್ಯ ಸರ್ಕಾರದ 4,000 ರೂ.ಗಳನ್ನು ಸೇರಿಸಿ ವರ್ಷಕ್ಕೆ 10,000 ರೂ. ನೀಡಲಾಗುತ್ತಿದೆ ಎಂದರು.
ಸಿದ್ದಲಿಂಗ ಶ್ರೀಗಳ ಆಶೀರ್ವಾದ ಪಡೆದು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳಲಿರುವ ಪ್ರಧಾನಮಂತ್ರಿಗಳಿಗೆ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿಗಳಿಗೆ ಭಾರತ ರತ್ನ ನೀಡುವಂತೆ ಮತ್ತೊಮ್ಮೆ ಮನವಿ ಮಾಡಿಕೊಳ್ಳಲಾಗುವುದು ಎಂದು ಸಚಿವ ವಿ.ಸೋಮಣ್ಣ ಹೇಳಿದರು. ರೈತ ಸಮಾವೇಶ ವೇದಿಕೆಗೆ ಪತ್ರಕರ್ತರನ್ನು ಬಿಡಲು ನಿರಾಕರಿಸಿದ ಪೊಲೀಸರಿಗೆ ಛೀಮಾರಿ ಹಾಕಿದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಪತ್ರಕರ್ತರ ಕ್ಷಮೆ ಯಾಚಿಸಿದರು.
ತುಮಕೂರಿನಲ್ಲಿ ಉಗ್ರರು ಅಡಗಿರುವ ಬಗ್ಗೆ ಮಾಹಿತಿ ಇರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿಗಳ ರೈತ ಸಮಾವೇಶಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು , ಎಸ್ಪಿಜಿ ತಂಡದವರು ಹದ್ದಿನ ಕಣ್ಣಿಟ್ಟಿದ್ದಾರೆ.
ಶಾಸಕ ಜಿ.ಬಿ.ಜ್ಯೋತಿಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ಜಿಲ್ಲಾಕಾರಿ ಡಾ. ರಾಕೇಶ್‍ಕುಮಾರ್, ಹೆಚ್ಚುವರಿ ಜಿಲ್ಲಾಕಾರಿ ಚೆನ್ನಬಸಪ್ಪ, ಉಪವಿಭಾಗಾಧಿಕಾರಿ ರವಿ ಕುಮಾರ್, ಲೋಕೋಪಯೋಗಿ ಇಲಾಖೆಯ ಸಂಜೀವ್ ರಾಜ್ ಸೇರಿದಂತೆ ಮಹಾನಗರ ಪಾಲಿಕೆಯ ಬಿಜೆಪಿ ಪಕ್ಷದ ಕಾಪೆರ್ರೇಟರ್‍ಗಳು , ಮುಖಂಡರುಗಳು ಸೇರಿದಂತೆ ಮೊದಲಾದವರು ಈ ವೇಳೆ ಹಾಜರಿದ್ದರು.









