
ಪುತ್ತೂರು: ಜೀವನವೆಂಬುದು ಒಂದು ರಂಗಿನ ರಂಗ ವೇದಿಕೆ. ಜೀವನ ಮೌಲ್ಯಗಳನ್ನು ತಿಳಿಸಿಕೊಡುವಲ್ಲಿ ರಂಗಭೂಮಿಯ ಕೊಡುಗೆ ಅನನ್ಯವಾದುದು ಎಂದು ರಂಗ ನಿರ್ದೇಶಕ ಕೃಷ್ಣಪ್ಪ ಬಂಬಿಲ ಹೇಳಿದರು.
ಸಂತ ಫಿಲೋಮಿನಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಪುತ್ತೂರು ತಾಲೂಕಿನ ದಕಜಿಪ ಉಹಿಪ್ರಾ ಶಾಲೆ ಕುರಿಯದಲ್ಲಿ ನಡೆಯುತ್ತಿರುವ ಒಂದು ವಾರದ ವಾರ್ಷಿಕ ವಿಶೇಷ ಶಿಬಿರದ 2ನೆಯ ದಿನದ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಉಪನ್ಯಾಸ ನೀಡಿದರು.
ಜೀವನದಲ್ಲಿ ಕಷ್ಟ-ಸುಖ, ಅಳು-ನಗು, ನೋವು-ನಲಿವು ಹೀಗೆ ಅನೇಕ ಸನ್ನಿವೇಶಗಳು ಎದುರಾಗುತ್ತವೆ. ಇವುಗಳನ್ನೆಲ್ಲಾ ಎದುರಿಸಿ, ಯಶಸ್ಸನ್ನು ಸಾಧಿಸುವ ಕಲೆಯನ್ನು ಮೈಗೂಡಿಸಿಕೊಳ್ಳಬೇಕು. ಶಿಸ್ತು ಮತ್ತು ಸದ್ವಿಚಾರಗಳನ್ನು ಅಗತ್ಯವಾಗಿ ಬೆಳೆಸಿಕೊಳ್ಳಬೇಕು. ದಿನ ನಿತ್ಯ ಸಂಭವಿಸುವ ತಪ್ಪುಗಳನ್ನು ಒಪ್ಪಿ, ಆದರ್ಶ ನಾಗರಿಕರಾಗಲು ಪ್ರಯತ್ನಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ಪುತ್ತೂರು ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಕೆ ಎಸ್ ರವೀಂದ್ರನಾಥ ರೈ ಬಳ್ಳಮಜಲು ಮಾತನಾಡಿ, ಬದುಕಿನಲ್ಲಿ ಶಿಸ್ತು ಮತ್ತು ಸಮಯ ಪ್ರಜ್ಞೆ ಬಹಳ ಮುಖ್ಯ. ವಿದ್ಯಾರ್ಥಿ ಬದುಕಿನಲ್ಲಿ ಜೀವನ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮುಂದಿನ ಬದುಕು ಉಜ್ವಲವಾಗಿ ಮೂಡಿ ಬರಲು ಸಹಕಾರಿಯಾಗುತ್ತದೆ. ಈ ಶಿಬಿರದಲ್ಲಿ ಗಳಿಸಿದ ಅನುಭವಗಳು ಭವಿಷ್ಯಕ್ಕೆ ದಾರಿ ದೀಪವಾಗಲಿ ಎಂದರು.
ವೇದಿಕೆಯಲ್ಲಿ ಸನತ್ ಕುಮಾರ್ ರೈ ಕುರಿಯ ಏಳ್ನಾಡುಗುತ್ತು, ರೇವತಿ ಬಳ್ಳಮಜಲು, ಕಾಲೇಜಿನ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಅಮ್ಮಣ್ಣ ರೈ ಮತ್ತು ಶಾಲಾ ಸಹಶಿಕ್ಷಕ ಜಗದೀಶ ಶೆಟ್ಟಿ ಉಪಸ್ಥಿತರಿದ್ದರು. ಎನ್ನೆಸ್ಸೆಸ್ ಅಧಿಕಾರಿ ಹಾಗೂ ಶಿಬಿರಾಧಿಕಾರಿಗಳಾದ ದಿನಕರ ಅಂಚನ್ ಮತ್ತು ಶಶಿಪ್ರಭಾ ಬಿ ಸಹಕರಿಸಿದರು.
ಮುಂಜಾನೆ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಎಮ್ ಎಸ್ ಧ್ವಜಾರೋಹಣ ಮಾಡಿ, ಶುಭ ಹಾರೈಸಿದರು.
ಶಿಬಿರಾರ್ಥಿ ತೇಜಸ್ವಿ ಎಮ್ ಸ್ವಾಗತಿಸಿ, ಕೃತಿಕಾ ಎಸ್ ವಂದಿಸಿದರು. ಪ್ರಮಿಳಾ ಪಿಂಟೊ ಕಾರ್ಯಕ್ರಮ ನಿರೂಪಿಸಿದರು.









