
ಬ್ರಿಸ್ಬೇನ್ (ಆಸ್ಟ್ರೇಲಿಯಾ): ಡಿಸೆಂಬರ್ ತಿಂಗಳು ಬಂತೆಂದರೆ ಕ್ರಿಸ್ ಮಸ್ ಸಡಗರದಲ್ಲಿ ಎಲ್ಲರೂ ಇರುತ್ತಾರೆ. ಅವರವರ ಮನೆಯಲ್ಲಿ ಕ್ರಿಸ್ಮಸ್ ಟ್ರೀ ಗೆ ಅಲಂಕಾರ ಮಾಡಲಾಗುತ್ತದೆ.
ಆದರೆ ಆಸ್ಟ್ರೇಲಿಯಾದ ಬ್ರಿಸ್ಬೇನ್ ನಲ್ಲಿರುವ ದಂಪತಿಗೆ ವಿಚಿತ್ರವಾದ ರೂಪವೊಂದು ಕ್ರಿಸ್ಮಸ್ ಟ್ರೀನಲ್ಲಿ ಕಂಡಿದೆ. ಹತ್ತಿರ ಹೋಗಿ ಗಮನಿಸಿದಾಗಲೇ ತಿಳಿದದ್ದು ಅದು ಹತ್ತು ಅಡಿ ಉದ್ದದ ಹೆಬ್ಬಾವು ಎಂದು.!
ಪ್ರತಿ ದಿನ ಮನೆಯ ಮುಂಭಾಗ ಬರುತ್ತಿದ್ದ ಹಕ್ಕಿಗಳು ಆ ದಿನ ಮಾತ್ರ ಮನೆಯ ಬಾಲ್ಕನಿಯಲ್ಲೇ ಇದ್ದಿದ್ದು, ಜಾನ್ ಬ್ರೂಕ್ಸ್ ಹಾಗೂ ಚಾಪ್ಮನ್ ದಂಪತಿಗೆ ಸ್ವಲ್ಪ ಅನುಮಾನ ಮೂಡಿಸಿತ್ತು. ಆಗ ಜಾನ್ ಹಕ್ಕಿಗಳ ವಿಡಿಯೋವನ್ನು ತೆಗೆಯಲು ಕ್ಯಾಮೆರಾ ಹಿಡಿದು ಹೊರಟಾಗ ಒಮ್ಮೆಲೇ ಗಾಬರಿಗೊಂಡಿದ್ದಾರೆ. ಕಾರಣ ಕ್ರಿಸ್ಮಸ್ ಟ್ರೀನಲ್ಲಿ ಹೆಬ್ಬಾವನ್ನು ಕಂಡಿದ್ದಾರೆ.
ಬಳಿಕ ಇದರ ಫೋಟೊವನ್ನು ತೆಗೆದು ಟ್ವಿಟರ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ದಂಪತಿ , “ಅದಕ್ಕೆ ಯಾವುದೇ ತೊಂದರೆ ಕೊಡದೆ ಕಿಟಕಿಯಿಂದಲೇ ನೋಡುತ್ತಿದ್ದೆವು. ಸ್ವಲ್ಪ ಸಮಯದ ಬಳಿಕ ಅದಾಗಿಯೇ ಅಲ್ಲಿಂದ ಹೊರಗೆ ಹೋಗಿ ಮರೆಯಾಯಿತು” ಎಂದು ಹೇಳಿದ್ದಾರೆ.











