
ನವದೆಹಲಿ : ಭೂಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ವರ್ಷಾಂತ್ಯಕ್ಕೆ ನಿವೃತ್ತರಾಗುತ್ತಿದ್ದು, ಅವರ ಸ್ಥಾನಕ್ಕೆ ಚೀನಾ ಗಡಿ ಬಿಕ್ಕಟ್ಟು ತಜ್ಞರೆಂದೇ ಹೆಸರುವಾಸಿಯಾದ ಲೆಫ್ಟಿನೆಂಟ್ ಜನರಲ್ ಮನೋಜ್ ಮುಕುಂದ್ ನರವಾನೆ ಆಯ್ಕೆಯಾಗಿದ್ದು, ಜ. ೧ ರಂದು ಅಧಿಕಾರ ಸ್ವೀಕರಿಸಲಿದ್ದಾರೆ.
ಕೇಂದ್ರ ಸರಕಾರ ಸೇವಾ ಹಿರಿತನವನ್ನು ಪರಿಗಣಿಸಿ ಮುಖ್ಯಸ್ಥರ ಹುದ್ದೆಗೆ ನರವಾನೆ ಅವರನ್ನು ನೇಮಿಸಿದೆ. ಸದ್ಯ ನರವಾನೆ ಅವರು ಭೂಸೇನೆಯ ಉಪಮುಖ್ಯಸ್ಥರಾಗಿದ್ದು, ಇದಕ್ಕೂ ಮುನ್ನ ಕೋಲ್ಕತಾ ಮೂಲದ ಪೂರ್ವ ಕಮಾಂಡ್‌ನ ನೇತೃತ್ವ ವಹಿಸಿದ್ದರು.
ರಾಷ್ಟ್ರೀಯ ಡಿಫೆನ್ಸ್ ಅಕಾಡೆಮಿಯಲ್ಲಿ ಶಿಕ್ಷಣ ಮುಗಿಸಿದ ನರವಾನೆ ಅವರು 1980ರ ಜೂನ್‌ನಲ್ಲಿ ಸಿಖ್ ಲೈಟ್ ಇನ್‌ಫ್ಯಾಂಟ್ರಿಗೆ ಸೇರ್ಪಡೆಗೊಂಡರು. ತಮ್ಮ 39 ವರ್ಷಗಳ ಸೇನಾ ಸೇವೆಯಲ್ಲಿ ನರವಾನೆ ಅವರು ರಾಷ್ಟ್ರೀಯ ರೈಫಲ್ಸ್‌ನ ನೇತೃತ್ವ ವಹಿಸಿದ್ದಾರೆ. ಸೇನಾ ತರಬೇತಿ ದಳದ ಮುಖ್ಯಸ್ಥ ಮತ್ತು ಶ್ರೀಲಂಕಾ ಹಾಗೂ ಮ್ಯಾನ್ಮಾರ್‌ನಲ್ಲಿ ಭಾರತೀಯ ಸೇನಾಪಡೆಯ ಶಾಂತಿಸ್ಥಾಪನೆ ಕಾರ್ಯಾಚರಣೆಗಳ ಮುಂದಾಳತ್ವವನ್ನು ವಹಿಸಿದ್ದಾರೆ.











