ಬದಲಾಯಿತು ಜೈಷ್ ಭಯೋತ್ಪಾದನೆ ಸಂಘಟನೆ ಹೆಸರು: ಭಾರತದಲ್ಲಿ ಆತ್ಮಾಹುತಿ ದಾಳಿಗೆ 30 ಉಗ್ರರ ತಂಡ ಸಜ್ಜು – ಕಹಳೆ ನ್ಯೂಸ್

ನವದೆಹಲಿ : ಪಾಕ್ ಮೂಲಕದ ಭಯೋತ್ಪಾದಕ ಸಂಘಟನೆ ಜೈಷ್ ಇ ಮೊಹಮ್ಮದ್ (ಜೆಇಎಂ) ತನ್ನ ಹೆಸರನ್ನು ಬದಲಿಸಿಕೊಂಡಿದೆ. ಮಜಲೀಸ್ ಉರಸಾ-ಎ-ಶುಹುದಾ ಜಮ್ಮು ವಾ ಕಾಶ್ಮೀರ್ ಎಂಬ ಹೊಸ ಹೆಸರಿನಲ್ಲಿ ಭಾರತದಲ್ಲಿ ಆತ್ಮಾಹುತಿ ದಾಳಿ ನಡೆಸಲು ಸಜ್ಜಾಗುತ್ತಿದೆ. ವಿಶೇಷವಾಗಿ ಭಾರತೀಯ ಸೇನಾ ಪಡೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ನಿರ್ಧರಿಸಿರುವ ಅದು ಅದಕ್ಕಾಗಿ 30 ಆತ್ಮಾಹುತಿ ಬಾಂಬರ್‍ಗಳ ತಂಡವನ್ನು ಸಿದ್ದಪಡಿಸಿದೆ ಎನ್ನಲಾಗಿದೆ.
ಪಾಕಿಸ್ತಾನದಲ್ಲಿ ತಾನು ಕೈಗೊಂಡಿರುವ ಜಿಹಾದಿ ತರಬೇತಿ ಚಟುವಟಿಕೆಗಳ ಬಗ್ಗೆ ಜೈಷ್ ಜಾಗತಿಕವಾಗಿ ಕೆಂಗಣ್ಣಿಗೆ ಗುರಿಯಾಗಿತ್ತು. ಇದರಿಂದ ಪಾರಾಗುವ ಸಲುವಾಗಿ ಅದು ಜಮ್ಮು ಮತ್ತು ಕಾಶ್ಮೀರದ ಸ್ವಾತಂತ್ರ್ಯ ಹೋರಾಟದ ಹೆಸರಿನಲ್ಲಿ ತನ್ನ ಹೆಸರನ್ನು ಬದಲಿಸಿಕೊಂಡಿದೆ ಎನ್ನಲಾಗಿದೆ. ಜಾಗತಿಕ ಉಗ್ರನೆಂದು ವಿಶ್ವಸಂಸ್ಥೆ ಗುರುತಿಸಿರುವ ಜೆಇಎಂ ಸಂಸ್ಥಾಪಕ ಮಸೂದ್ ಅಜರ್ ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಹಾಸಿಗೆ ಹಿಡಿದಿದ್ದಾನೆ. ಈ ಹಿನ್ನೆಲೆಯಲ್ಲಿ ಆತನ ಕಿರಿಯ ಸಹೋದರ ಮುಫ್ತಿ ಅಬ್ದುಲ್ ರೌಫ್ ಅಸ್ಗರ್ ಮಜಲೀಸ್ ಉರಸಾ-ಎ-ಶುಹುದಾ ಜಮ್ಮು ವಾ ಕಾಶ್ಮೀರ್ ಸಂಘಟನೆಯ ನೇತೃತ್ವ ವಹಿಸಿಕೊಂಡಿದ್ದಾನೆ ಎನ್ನಲಾಗಿದೆ.
ಭಾರತದ ಭಯೋತ್ಪಾದನಾ ನಿಗ್ರಹ ಪಡೆ ಮೂಲಗಳ ಪ್ರಕಾರ, ಹಳೇ ಬಾಟಲಿಯಲ್ಲಿ ಹೊಸ ಮದ್ಯದಂತೆ ಜೆಇಎಂ ಹಳೇ ನಾಯಕತ್ವದಲ್ಲಿ ಹೊಸ ಹೆಸರಿನಲ್ಲಿ ತಲೆಯೆತ್ತುತ್ತಿದೆ. ಈ ಹಿಂದೆ ಅದು ಖುದಂ ಉಲ್ ಇಸ್ಲಾಮ್ ಮತ್ತು ಅಲ್ ರೆಹಮತ್ ಟ್ರಸ್ಟ್ ಎಂಬ ಹೆಸರಿನಿಂದಲೂ ಗುರುತಿಸಿಕೊಂಡಿತ್ತು.
ಜೆಇಎಂ ಹಳೆಯ ನಾಯಕತ್ವ ಹಾಗೂ ಹಳೆ ಕೇಡರ್‍ನೊಂದಿಗೆ ಹೊಸ ಹೆಸರಿನಲ್ಲಿ ಉದಯಿಸುತ್ತಿದೆ. ಹಿಂದೆ ಕುಂದಂ ಉಲ್ ಇಸ್ಲಾಮ್ ಆಂಡ್ ಅಲ್ ರೆಹಮತ್ ಟ್ರಸ್ಟ್ ಎಂದು ಕರೆಯಲಾಗುತ್ತಿತ್ತು. ಜಮ್ಮು ಮತ್ತು ಕಾಶ್ಮೀರದ ಹುತಾತ್ಮ ವಂಶಸ್ಥರ ಸಂಘ (ಮಜಲೀಸ್ ಉರಸಾ-ಎ-ಶುಹುದಾ ಜಮ್ಮು ವಾ ಕಾಶ್ಮೀರ್) ಕೂಡ ತನ್ನ ಮೂಲಸಂಸ್ಥೆಯ ಆಶಯಗಳನ್ನೇ ಹೊಂದಿದೆ. ಅಲ್-ಜಿಹಾದ್ ಎಂಬ ಪದವನ್ನು ಅಲ್ ಇಸ್ಲಾಂ ಎಂದು ಬದಲಿಸುವ ಮೂಲಕ ಜಾಗತಿಕವಾಗಿ ಕಣ್ಣಿಗೆ ಮಣ್ಣೆರೆಚಲು ಪ್ರಯತ್ನಿಸುತ್ತಿದೆ.
ಪಾಕ್‍ನಲ್ಲಿನ ಆಗುಹೋಗುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿರುವವರ ಪ್ರಕಾರ ಜೆಇಎಂ 30 ಮಂದಿಯ ಆತ್ಮಾಹುತಿ ದಾಳಿಕೋರರ ತಂಡವನ್ನು ಸಿದ್ಧಪಡಿಸಿದೆಯಂತೆ. ಜಮ್ಮು ಮತ್ತು ಕಾಶ್ಮೀರದಲ್ಲಿರುವ ಭಾರತದ ಸೇನಾ ನೆಲೆಗಳು, ಮಿಲಿಟರಿ ವಸತಿ ಪ್ರದೇಶಗಳು ಹಾಗೂ ಭದ್ರತಾ ಪಡೆಗಳ ವಾಹನಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡುವುದು ಈ ತಂಡದ ಉದ್ದೇಶ ಎನ್ನಲಾಗಿದೆ.
ಭಾರತದ ವೈಮಾನಿಕ ದಾಳಿಯಲ್ಲಿ ಸಂಪೂರ್ಣವಾಗಿ ನಾಶವಾಗಿದ್ದ ಬಾಲಾಕೋಟ್‍ನ ಮರ್ಕಾಜ್ ಸಯ್ಯದ್ ಅಹ್ಮದ್ ಶಹೀನ್ ಎಂಬ ಉಗ್ರರ ತರಬೇತಿ ಕೇಂದ್ರ ಸೆಪ್ಟೆಂಬರ್‍ನಲ್ಲಿ ಮರುಆರಂಭಗೊಂಡಿದೆ. ಅಲ್ಲದೆ, ಭವಲ್‍ಪುರ್ ಮತ್ತು ಸಿಯಾಲ್‍ಕೋಟ್‍ನ ಯುವಕರನ್ನು ಸೆಳೆದು ಭಾರತದ ಸೇನಾ ನೆಲೆಗಳ ಮೇಲೆ ದಾಳಿ ನಡೆಸಲು ತರಬೇತುಗೊಳಿಸಲಾಗುತ್ತಿದೆ ಎನ್ನಲಾಗಿದೆ.









