ವಿಕಾಲಾಂಗ ಬೀದಿಬದಿ ವ್ಯಾಪಾರಿಗಳ ಮೇಲೆ ನಗರಪಾಲಿಕೆ ಅಮಾನವೀಯ ಧಾಳಿ,ಅಧಿಕಾರಿಗಳ ವಿರುದ್ಧ ವ್ಯಾಪಕ ಆಕ್ರೋಶ -ಕಹಳೆ ನ್ಯೂಸ್

ಮಂಗಳೂರು : ನಗರದ ಪಡೀಲ್ ಬಳಿ ಇರುವ ಜಿಲ್ಲಾಧಿಕಾರಿ ಕಚೇರಿ ಎದುರಿನ ರಸ್ತೆಯಲ್ಲಿ ಕಳೆದ 12ವರ್ಷಗಳಿಂದ ಬೀದಿಬದಿಯಲ್ಲಿ ಹೂವಿನ ವ್ಯಾಪಾರ ನಡೆಸುತಿದ್ದ ವಿಕಾಲಾಂಗ ಬೀದಿ ವ್ಯಾಪಾರಿಗಳಾದ ಚಂದ್ರಹಾಸ್ ಮತ್ತು ಸುನೀತಾ ಎಂಬವರ ಹೂವಿನ ಸ್ಟಾಲನ್ನು ನಗರಪಾಲಿಕೆಯ ವಲಯ 2ರ ಆಯುಕ್ತೆ ರೇಖಾ ಶೆಟ್ಟಿ ನೇತೃತ್ವದಲ್ಲಿ ಪಾಲಿಕೆ ಅಧಿಕಾರಿಗಳು ನಿಯಮಬಾಹಿರ ಕಾರ್ಯಾಚರಣೆ ನಡೆಸಿ ಅವರ ಸೊತ್ತುಗಳನ್ನು ಬುಲ್ದೊಜರ್ ಬಳಸಿಕೊಂಡು ಧ್ವಂಸಗೊಳಿಸಿ ನಾಶಪಡಿಸಿರುವ ಪಾಲಿಕೆಯ ಅಮಾನವೀಯ ಕ್ರಮದ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಪಾಲಿಕೆಯ ಕಾರ್ಯಾಚರಣೆಯಿಂದ ಸಂತ್ರಸ್ತರಾದ ವಿಕಾಲಾಂಗ ಬೀದಿ ವ್ಯಾಪಾರಿ ಚಂದ್ರಹಾಸ್ ಮಾಧ್ಯಮಗಳ ಜೊತೆ ಮಾತನಾಡುತ್ತಾ ನಾನು 75% ಅಂಗ ವೈಕಲ್ಯ ಹೊಂದಿರುವ ವ್ಯಕ್ತಿಯಾಗಿದ್ದೇನೆ.12ವರ್ಷಗಳಿಂದ ಇಲ್ಲಿ ಬೀದಿಬದಿಯಲ್ಲಿ ಹೂವಿನ ವ್ಯಾಪಾರ ಮಾಡಿ ನನ್ನ ಕುಟುಂಬ ಸಾಗಿಸುತ್ತಿದ್ದೇನೆ ನಾನು ಬೀದಿಬದಿ ವ್ಯಾಪಾರದ ಕಾನೂನಿನಂತೆ ನಗರಪಾಲಿಕೆಯಿಂದ ವ್ಯಾಪಾರದ ಪ್ರಮಾಣ ಪತ್ರ ಮತ್ತು ಗುರುತಿನ ಚೇಟಿ ಹೊಂದಿರುತ್ತೇನೆ ನನಗೆ ಪರ್ಯಾಯ ವ್ಯವಸ್ಥೆಯೂ ಮಾಡದೆ, ಯಾವುದೇ ನೋಟಿಸು ನೀಡದೆ ಕಾರ್ಯಾಚರಣೆ ಮಾಡಿ ಅಂಗವಿಕಲನಾಗಿರುವ ನನಗೆ ಪಾಲಿಕೆ ಅಧಿಕಾರಿಗಳು ದೌರ್ಜನ್ಯ ಎಸಗಿದ್ದಾರೆ ಮತ್ತು ನನ್ನ ಬದುಕುವ ಹಕ್ಕಿನ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ ಎಂದು ಅವರು ಆರೋಪಿಸಿದರು.
ಮತ್ತೋರ್ವ ಸಂತ್ರಸ್ತೆ ಸುನಿತಾ ಮಾತನಾಡಿ ನಾನು ಅಂಗವಿಕಲೆಯಾಗಿದ್ದು ಕ್ಯಾನ್ಸರ್ ಕಾಯಿಲೆಯಿಂದ ಗಂಡನನ್ನು ಕಳೆದುಕೊಂಡ ವಿಧವೆಯಾಗಿದ್ದು ಮಕ್ಕಳ ಭವಿಷ್ಯಕ್ಕಾಗಿ ಬೀದಿಬದಿಯಲ್ಲಿ ವ್ಯಾಪಾರ ಮಾಡಿಕೊಂಡು ಬಹಳ ಕಷ್ಟದಲ್ಲಿ ಜೀವನ ಸಾಗಿಸುತಿದ್ದೆ ನಗರಪಾಲಿಕೆ ಅಧಿಕಾರಿಗಳು ಯಾವುದೇ ಕನಿಕರ ತೋರದೆ ಅಮಾನುಷವಾಗಿ ನನ್ನ ತಳ್ಳುಗಾಡಿಯನ್ನು ಧ್ವಂಸ ಮಾಡಿದ್ದಾರೆ. ನನ್ನ ಜೀವನಕ್ಕೆ ದಾರಿಯಾಗಿದ್ದ ವ್ಯಾಪಾರವನ್ನು ಕಿತ್ತುಕೊಂಡು ನನ್ನ ಜೀವನ ಬೀದೀಪಾಲಾಗುವಂತೆ ಆಯಿತು ಎಂದು ಕಣ್ಣೇರು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ (ಸಿಐಟಿಯು ) ಇದರ ಗೌರವಧ್ಯಕ್ಷರಾದ ಬಿ.ಕೆ ಇಮ್ತಿಯಾಜ್ ಮತ್ತು ನಿಯೋಗ ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿ ವ್ಯಾಪಾರ ಮಾಡಲು ಹೋರಾಟದ ಮೂಲಕ ಸಹಕಾರ ನೀಡುವ ಭರವಸೆ ನೀಡಿದರು.
ಈ ಸಂಧರ್ಭದಲ್ಲಿ ಬಿ.ಕೆ ಇಮ್ತಿಯಾಜ್ ಮಾತನಾಡಿ ನಗರಪಾಲಿಕೆ ಆಯುಕ್ತರು ಮತ್ತು ಆಡಳಿತಧಿಕಾರಿಗಳು ಗುರುತಿನ ಚೀಟಿ ಮತ್ತು ಪ್ರಮಾಣ ಪತ್ರ ಹೊಂದಿರುವವರಿಗೆ ಮಾತ್ರ ಬೀದಿ ವ್ಯಾಪಾರಕ್ಕೆ ಅವಕಾಶ ಎಂದು ಹೇಳಿಕೆ ಕೊಡುತ್ತಾರೆ ಇಲ್ಲಿ ಐಡಿ ಕಾರ್ಡ್ ಹೊಂದಿರುವ ವಿಕಾಲಾಂಗರನ್ನು ಬಿಡದೆ ಅಮಾನವೀಯವಾಗಿ ಧಾಳಿ ನಡೆಸುತ್ತಾರೆ ಈ ರೀತಿಯ ಬೀದಿಬದಿ ವ್ಯಾಪಾರದ ಕಾನೂನಿನ ಸ್ಪಷ್ಟ ಉಲ್ಲಂಘನೆ ಎಂದು ಇಮ್ತಿಯಾಜ್ ಆರೋಪಿಸಿದರು.
ಅಧಿಕಾರಿಗಳು ಅಂಗವಿಕಲರನ್ನು ಕರುಣೆ ತೋರಿಸದೆ ನಿರ್ದಯಿಗಳಂತೆ ವರ್ತಿಸಿದ್ದಾರೆ ಕಾನೂನು ಮೀರಿ ಕಾರ್ಯಾಚರಣೆ ನಡೆಸಿರುವ ಅಧಿಕಾರಿಗಳ ವಿರುದ್ದ ಕ್ರಮ ಜರಗಿಸಬೇಕೆಂದು ಆಗ್ರಹಿಸಿದರು.
ಈ ಸಂಧರ್ಭದಲ್ಲಿ ಸಂಘದ ಪ್ರಮುಖರಾದ ಮುಜಾಫರ್ ಅಹ್ಮದ್, ಸಂತೋಷ್ ಆರ್. ಎಸ್, ವಿಜಯ್ ಜೈನ್ ಉಪಸ್ಥಿತರಿದ್ದರು









