
ಪತಿ ಹಾಗೂ ಪತ್ನಿಯ ಮೃತ ದೇಹ ಬಾಡಿಗೆ ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.ಆಲಂಕಾರು ಪೇಟೆಯಲ್ಲಿ ಹೋಟೆಲ್ ನಡೆಸುತ್ತಿದ್ದ ಬಜಗೋಳಿಯ ದಿನೇಶ್ ಹಾಗೂ ಸಿದ್ದಕಟ್ಟೆಯ ಸಂಗೀತ ದಂಪತಿ ಮೃತಪಟ್ಟ ದುರ್ದೈವಿಗಳೆಂದು ತಿಳಿದು ಬಂದಿದೆ.
ಪತ್ನಿಯನ್ನು ಕೊಂದು ಬಳಿಕ ಪತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ದಿನೇಶ್ ಮತ್ತು ಸಂಗೀತ ದಂಪತಿ ತಮ್ಮ ಎರಡು ವರ್ಷದ ಹೆಣ್ಣು ಮಗು ದೃವಿಯೊಂದಿಗೆ ವಾಸವಾಗಿದ್ದರು. ಒಂದು ತಿಂಗಳ ಹಿಂದೆಯಷ್ಟೇ ಆಲಂಕಾರು ಪೇಟೆಯ ಹೋಟೆಲ್ ವ್ಯವಹಾರವನ್ನು ಬಿಟ್ಟು ತೆರಳಿದ್ದರು. ಆದರೆ ಜೂನ್ 19ರ ಸಂಜೆ ಮತ್ತೆ ಆಲಂಕಾರು ಕಜೆಯ ಬಾಡಿಗೆ ಮನೆಗೆ ಬಂದಿದ್ದರು ಎನ್ನಲಾಗಿದೆ. ಜೂನ್ 20ರಂದು ದಂಪತಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಮನೆಯ ಒಳಗಿನಿಂದ ಚಿಲಕ ಹಾಕಲಾಗಿತ್ತು. ಈ ವೇಳೆ ಮನೆಯಲ್ಲಿ ಇದ್ದ ಎರಡು ವರ್ಷದ ಹೆಣ್ಣು ಮಗು ಅತ್ತುಕೊಂಡು ಬಳಿಕ ನಿದ್ರೆಗೆ ಜಾರಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಮಗುವಿನ ಅಳುವಿನ ಶಬ್ದ ಕೇಳಿ ಅನುಮಾನಗೊಂಡ ನೆರೆಹೊರೆಯವರು ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ ಎನ್ನಲಾಗಿದೆ.









