Monday, May 4, 2026
ಸುದ್ದಿ

ಆಟಿ ಅಮವಾಸ್ಯೆ ಮತ್ತು ಹಾಲೆ ಮರದ ಕಷಾಯದ ವಿಶೇಷತೆ – ಕಹಳೆ ನ್ಯೂಸ್

ಆಟಿ ತಿಂಗಳು ಎಂದಾಕ್ಷಣ ಯಾವುದೇ ಶುಭ ಸಮಾರಂಭಗಳು ನಡೆಯುವುದಿಲ್ಲ ಎಂಬ ವಾಡಿಕೆ ಇದೆ. ನಮ್ಮ ಕರಾವಳಿಯಲ್ಲಿ ಆಟಿ ತಿಂಗಳಲ್ಲಿ ಹಲವಾರು ವಿಶೇಷ ಆಚರಣೆಗಳನ್ನು ಕಾಣಬಹುದು. ಅವುಗಳಲ್ಲಿ ಆಷಾಢ ಅಮಾವಾಸ್ಯೆ ಅಥವಾ ಆಟಿ ಅಮಾವಾಸ್ಯೆ ಕೂಡ ಒಂದು. ಈ ದಿನದ ಸ್ಪೆಷಲ್ ಆಟಿ ಕಷಾಯಕ್ಕೂ ಅಗ್ರ ಸ್ಥಾನವಿದೆ.

ಹಾಲೆ ಅಥವಾ ಪಾಲೆ ಮರದ ಕಷಾಯವನ್ನು ಕುಡಿಯುವುದು ತುಳುನಾಡಿನಲ್ಲಿ ಆಚರಣೆಯಲ್ಲಿರುವಂತಹ ಸಂಪ್ರದಾಯವಾಗಿದೆ. ಮರದಿಂದ ತೊಗಟೆಯನ್ನು ತೆಗೆಯುವುದಕ್ಕೂ ಒಂದು ಕ್ರಮವಿದೆ. ಸೂರ್ಯೋದಕ್ಕೂ ಮುನ್ನವೇ ಬೆತ್ತಲೆಯಾಗಿ ಪಾಲೇ ಮರದ ಬಳಿ ಹೋಗಿ ಬಿಳಿ ಕಲ್ಲಿನಿಂದ ಜಜ್ಜಿ ಆ ಮರದ ತೊಗಟೆಯನ್ನು ತೆಗೆಯಲಾಗುತ್ತದೆ. ಯಾವುದೇ ಕಾರಣಕ್ಕೂ ಕಬ್ಬಿಣದ ಕತ್ತಿಯನ್ನು ಮರಕ್ಕೆ ತಾಗಿಸುವಂತಿಲ್ಲ ಎಂಬುದು ವಾಡಿಕೆ. ಹಾಲೆ ಮರದ ಕೆತ್ತೆಯನ್ನು ಜಜ್ಜಿ ಅದಕ್ಕೆ ಕರಿ ಮೆಣಸು, ಬೆಳ್ಳುಳ್ಳಿ, ಓಂ ಕಾಳು ಸೇರಿಸಿ ಕಷಾಯ ಮಾಡಿ ತಿಂಗಳ ಅಮಾವಾಸ್ಯೆಯ ನಸುಕಿನಲ್ಲಿ ಖಾಲಿ ಹೊಟ್ಟೆಯಲ್ಲಿ ಸೇವಿಸುವ ರೂಢಿ ಇದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಹಿಂದೆ ಆಟಿ ತಿಂಗಳಲ್ಲಿ ವಿಪರೀತ ಮಳೆ ಇರುತ್ತಿತ್ತಂತೆ. ಈ ಸಮಯದಲ್ಲಿ ಜನರಿಗೆ ಊಟ ಮಾಡಲು ಕಷ್ಟವಾಗುತ್ತಿತ್ತಂತೆ. ಇದರಿಂದ ಹಲವಾರು ರೋಗಗಳು ದೇಹವನ್ನು ಬಾಧಿಸುತ್ತಿದ್ದವು. ಈ ಸಮಯದಲ್ಲಿ ಆಟಿ ಕಳೆಂಜ ದೈವ ಈ ಮರದಲ್ಲಿ ಅಮಾವಾಸ್ಯೆ ದಿನ ಹಲವು ಔಷಧೀಯ ಗುಣವನ್ನು ತಂದು ಇರಿಸುತ್ತಿತ್ತು ಎಂಬ ನಂಬಿಕೆ ಇತ್ತು. ಹಾಗೆ ಯಾರು ಆಟಿ ಅಮಾವಾಸ್ಯೆ ದಿನ ಈ ಮರದ ಕೆತ್ತೆಯ ಕಷಾಯ ಮಾಡಿ ಕುಡಿಯುತ್ತಾರೆ ಅವರಿಗೆ ವರ್ಷ ಪೂರ್ತಿ ಯಾವುದೇ ರೋಗಗಳು ಬಾಧಿಸುವುದಿಲ್ಲ ಎಂಬ ನಂಬಿಕೆ ಇದೆ.

ಪಾಲೆ ಮರದ ಕಷಾಯ ಕುಡಿದರೆ ಹೊಟ್ಟೆನೋವು, ಅತಿಸಾರ, ವಾತ, ಸಂಧಿನೋವು, ಮಲೇರಿಯಾ, ಜ್ವರ, ಕಫ … ಹೀಗೆ ಹಲವಾರು ರೋಗ ನಿವಾರಣೆ ಆಗುತ್ತದೆ ಎಂದು ವೈಜ್ಞಾನಿಕವಾಗಿಯೂ ತಿಳಿದು ಬಂದಿದೆ.

ಇತ್ತೀಚಿನ ದಿನಗಳಲ್ಲಿ ಸಂಪ್ರದಾಯ, ಆಚರಣೆಗಳಲ್ಲಿ ಹಲವು ಬದಲಾವಣೆ ಕಂಡು ಬಂದರೂ ಸಹ ಇಂದಿಗೂ ಕರಾವಳಿಯಲ್ಲಿ ಹಲವೆಡೆ ಆಟಿ ಅಮಾವಾಸ್ಯೆ ದಿನ ಕಷಾಯ ಸೇವಿಸುವ ಸಂಪ್ರದಾಯ ಮುಂದುವರೆದುಕೊಂಡು ಬಂದಿರುವ ನಿಜಕ್ಕೂ ಖುಷಿ ಎನಿಸುತ್ತದೆ.