Recent Posts

Saturday, May 9, 2026
ಸುದ್ದಿ

ಫಿಲೋಮಿನಾದ ಅರ್ಥಶಾಸ್ತ್ರ ಪ್ರಾಧ್ಯಾಪಕ ಪ್ರೊ. ಗಣಪತಿಯವರಿಗೆ ನಿವೃತ್ತಿ ವಿದಾಯ – ಕಹಳೆ ನ್ಯೂಸ್

ಪುತ್ತೂರು: ಉನ್ನತ ಮಟ್ಟದ ನಾಯಕರನ್ನು ಸೃಷ್ಟಿಸುವ ಮಹತ್ವಪೂರ್ಣ ಕಾಯಕವನ್ನು ಕೈಗೊಳ್ಳುವವರು ಶಿಕ್ಷಕರು. ಶಿಕ್ಷಕರ ಸೇವೆಗೆ ಸಮನಾದುದು ಇನ್ಯಾವುದೂ ಇಲ್ಲ ಎಂದು ಸಂತ ಫಿಲೋಮಿನಾ ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೋ ನೊರೊನ್ಹಾ ಹೇಳಿದರು.

ಸಂತ ಫಿಲೋಮಿನಾ ಕಾಲೇಜಿನ ಮಾನವಿಕ ಸಂಘವು 37 ವರ್ಷಗಳ ಸುಧೀರ್ಘ ಅವಧಿಯ ಸೇವೆ ಸಲ್ಲಿಸಿ, ಜುಲೈ 31ರಂದು ವಯೋನಿವೃತ್ತರಾದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಗಣಪತಿ ಎಸ್ ಇವರಿಗೆ ಆಯೋಜಿಸಲಾದ ವಿದಾಯ ಸಮಾರಂಭದ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ಶಿಕ್ಷಕರಲ್ಲಿ ವಿಮರ್ಶಾ ಗುಣ, ಔದಾರ್ಯತೆ, ಬದ್ಧತೆ, ನಮ್ರತೆ, ಸರಳತೆ ಮೊದಲಾದ ಉತ್ತಮ ಗುಣಗಳಿರಬೇಕು. ಬಾಳಲ್ಲಿ ಬೆಳಕು ಚೆಲ್ಲಿದ ಶಿಕ್ಷಕರನ್ನು ವಿದ್ಯಾರ್ಥಿಗಳು ಜೀವನಪರ್ಯಂತ ಸ್ಮರಿಸಿಕೊಳ್ಳುತ್ತಾರೆ ಎಂದು ಹೇಳಿ, ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ಡಾ. ಆ್ಯಂಟನಿ ಪ್ರಕಾಶ್ ಮೊಂತೆರೊ ಮಾತನಾಡಿ, ಶಿಕ್ಷಣ ಸಂಸ್ಥೆಯ ಸರ್ವಾಂಗೀಣ ಬೆಳವಣಿಗೆಯಲ್ಲಿ ಶಿಕ್ಷಕ ವರ್ಗದವರ ಪಾಲು ಮಹತ್ವಪೂರ್ಣವಾದುದು. ಶಿಕ್ಷಕರಾದವರಲ್ಲಿ ಜ್ಞಾನ ಸಂಪತ್ತಿನೊಂದಿಗೆ ಭಾಷಾ ಸಂಪತ್ತು ತುಂಬಿರಬೇಕು ಎಂದು ಹೇಳಿ, ಆಡಳಿತ ಮಂಡಳಿಯ ವತಿಯಿಂದ ಶುಭ ಹಾರೈಸಿದರು.

ಸನ್ಮಾನ ಸ್ವೀಕರಿಸಿದ ಪ್ರೊ ಗಣಪತಿ ಎಸ್ ಮಾತನಾಡಿ, ವ್ಯಕ್ತಿಯು ಬದುಕಿನಲ್ಲಿ ಜ್ಞಾನ ಹೊಂದಿದಂತೆ ಉತ್ಕøಷ್ಟತೆಯನ್ನು ಏರುತ್ತಾ ಹೋಗುತ್ತಾನೆ. ಮೂವತ್ತೇಳು ವರ್ಷಗಳ ಸುದೀರ್ಘ ಶಿಕ್ಷಕ ವೃತ್ತಿಯನ್ನು ಸಂಪೂರ್ಣವಾಗಿ ಅನುಭವಿಸಿದ ಖುಷಿ ನನಗಿದೆ. ವಿದ್ಯಾರ್ಥಿ ದೆಸೆಯಲ್ಲಿ ಭಾಷೆಯ ನಾನಾ ಬಗೆಗಳನ್ನು ಕಲಿಯುವ ಹುಮ್ಮಸ್ಸಿರಬೇಕು. ಓದಬೇಕು, ಬರೆಯಬೇಕು, ಸ್ವಂತ ಬರವಣಿಗೆ ರೂಢಿಸಿಕೊಳ್ಳಬೇಕು, ಅದಕ್ಕಾಗಿ ನಿರಂತರ ಓದುವುದು ಅಭ್ಯಾಸವಾಗಬೇಕು. ಶಿಕ್ಷಕ ಕಲಿಯುತ್ತಲೇ ಕಲಿಸಬೇಕು. ಕಲಿಕೆ ಪ್ರಕ್ರಿಯೆಗೆ ಕೊನೆ ಇರಬಾರದು. ಗೊತ್ತಿರುವ ಜ್ಞಾನವನ್ನು ವಿನಿಮಯ ಮಾಡಿಕೊಳ್ಳಲು ಯಾವುದೇ ಭೇದಭಾವ ಇರಬಾರದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅರ್ಥಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಪ್ರೊ. ದಿನಕರ ರಾವ್ ಮತ್ತು ವಿದ್ಯಾರ್ಥಿನಿ ಅನ್ನಮ್ಮ ಅಭಿನಂದನಾ ಭಾಷಣ ಮಾಡಿದರು. ವೇದಿಕೆಯಲ್ಲಿ ಮಾನವಿಕ ಸಂಘದ ನಿರ್ದೇಶಕ ಪ್ರೊ. ಸುಬೈರ್ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಪ್ರಿಯಾಂಕ ಮಾಡ್ತ ಸ್ವಾಗತಿಸಿ, ವಿದ್ಯಾರ್ಥಿ ಶಿವಕುಮಾರ್ ವಂದಿಸಿ, ವಿದ್ಯಾರ್ಥಿನಿ ಕ್ಯಾರೆಲ್ ಫೆರ್ನಾಂಡಿಸ್ ನಿರೂಪಿಸಿದರು.