
ಪುತ್ತೂರು: ಶಿಕ್ಷಣ ಸಂಸ್ಥೆಗಳು ಅಜ್ಞಾನವೆಂಬ ಅಂಧಕಾರವನ್ನು ಹೋಗಲಾಡಿಸಿ, ಬದುಕಿಗೆ ಅಗತ್ಯವಿರುವ ಸುಜ್ಞಾನವನ್ನು ಧಾರೆ ಎರೆಯಬಲ್ಲ ಜ್ಞಾನ ದೇಗುಲಗಳು. ಬದುಕಿನಲ್ಲಿ ಇಚ್ಛಾಶಕ್ತಿ, ಧೈರ್ಯ ಮತ್ತು ಛಲವಿದ್ದರೆ ಅಸಾಧ್ಯವಾದುದು ಯಾವುದೂ ಇಲ್ಲ ಎಂದು ಪುತ್ತೂರು ವಿಭಾಗದ ಡಿವೈಎಸ್ಪಿ ದಿನಕರ ಶೆಟ್ಟಿ ಹೇಳಿದರು.

ಸಂತ ಫಿಲೋಮಿನಾ ಕಾಲೇಜಿನ ಶೈಕ್ಷಣಿಕ ವರ್ಷ 2019-20 ರ ವಿದ್ಯಾರ್ಥಿ ಸಂಘವನ್ನು ಜುಲೈ 30 ರಂದು ಕಾಲೇಜಿನ ಬೆಳ್ಳಿ ಸಭಾಂಗಣದಲ್ಲಿ ಉದ್ಘಾಟಿಸಿ, 60 ವರ್ಷಗಳಿಂದ ಗ್ರಾಮೀಣ ಭಾಗದ ಶಿಕ್ಷಣಾಸಕ್ತರನ್ನು ಸಾಕ್ಷರನ್ನಾಗಿಸುವ ಮೂಲಕ ಈ ಸಂಸ್ಥೆ ಮಹೋನ್ನತ ಸಾಧನೆಯನ್ನು ಮಾಡಿದೆ. ಈ ಸಂಸ್ಥೆಯಲ್ಲಿ ಶಿಕ್ಷಣ ಪಡೆದವರು ಪೊಲೀಸ್ ಇಲಾಖೆಯಲ್ಲಿಯೂ ದಕ್ಷ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಾನವನಿಗೆ ಹುಟ್ಟಿನಿಂದ ಶ್ರೇಷ್ಠತೆ ಬರಲಾರದು, ಮಾಡುವ ಕೆಲಸದಿಂದ ಮಾತ್ರ ಘನತೆ, ಗೌರವ ಪ್ರಾಪ್ತಿಯಾಗುತ್ತದೆ. ನಾವು ಉಪಯೋಗಿಸುವ ಮೊಬೈಲ್ ಫೋನು ಬಹಳ ಚೆನ್ನಾಗಿರುವ ವಸ್ತು. ಆದರೆ ಅದು ಅಷ್ಟೇ ಅಪಾಯಕಾರಿ. ಇದನ್ನು ಬಳಸುವಾಗ ಖಾಸಗಿತನವನ್ನು ಎಂದಿಗೂ ಇತರರೊಂದಿಗೆ ಹಂಚಿಕೊಳ್ಳಬೇಡಿ. ಹೆತ್ತವರ ಕನಸನ್ನು ನನಸಾಗಿಸಿ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಂಗಳೂರು ವಿಶ್ವವಿದ್ಯಾನಿಲಯದ ಕಾಲೇಜು ಅಭಿವೃದ್ಧಿ ಮಂಡಳಿಯ ನಿರ್ದೇಶಕ ಪ್ರೊ. ಪಿ. ಎಲ್ ಧರ್ಮ ಮಾತನಾಡಿ, ಈ ಶಿಕ್ಷಣ ಸಂಸ್ಥೆಯು ಸಮಾಜದ ಎಲ್ಲಾ ಜಾತಿ, ವರ್ಗ, ಧರ್ಮಗಳ ವಿದ್ಯಾರ್ಥಿಗಳಿಗೆ ಸಮಾನ ಪ್ರಾತಿನಿಧ್ಯ ನೀಡುವ ಮೂಲಕ ಸಮಾನತೆಯನ್ನು ಸಾರುತ್ತಿದೆ. ವಿದ್ಯಾರ್ಥಿಗಳಿಗೆ ಎಲ್ಲಾ ಕ್ಷೇತ್ರಗಳ ಬಗ್ಗೆ ಪರಿಜ್ಞಾನವಿರಬೇಕು. ಸಾಮಾಜಿಕ ಜವಾಬ್ದಾರಿಯಿದ್ದಾಗ ಮಾತ್ರ ದೇಶ ಕಾಯುವ ಸೈನಿಕನಾಗಿ ರೂಪುಗೊಳ್ಳಲು ಸಾಧ್ಯ. ತಾಳ್ಮೆ, ಶಾಂತಿ, ಸಮಾಧಾನ, ಸಾಮರಸ್ಯದಿಂದ ಜೀವಿಸಲು ಸಾಧ್ಯವಾದರೆ ಸುಂದರ ಸಮಾಜ ಸೃಷ್ಟಿಯಾಗಬಲ್ಲುದು. ಯುಜಿಸಿಯು ಜಾರಿಗೊಳಿಸುತ್ತಿರುವ ಹೊಸ ಶಿಕ್ಷಣ ನೀತಿ ಜಾರಿಗೊಂಡಲ್ಲಿ ಬಹುಸಂಸ್ಕೃತಿಗೆ ಸೂಕ್ತ ಮನ್ನಣೆ ಸಿಗಬಲ್ಲುದು ಎಂದು ಹೇಳಿದರು.
ಗೌರವ ಅತಿಥಿಗಳಾಗಿ ಭಾಗವಹಿಸಿದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ವಿಜಯ್ ಲೋಬೊ ಮಾತನಾಡಿ, ವಿದ್ಯಾರ್ಥಿಗಳು ಸದಾ ಧನಾತ್ಮಕ ಬದಲಾಣೆಯ ಕನಸು ಕಾಣಬೇಕು. ನಮ್ಮಲ್ಲಿರುವ ಅಹಂಕಾರ, ಕೋಪ, ಸ್ವಾರ್ಥ, ಅಸೂಯೆ, ದುಶ್ಚಟ ಮುಂತಾದವುಗಳು ದೂರವಾದಾಗ ಸಮಾಜದಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸಬಹುದು ಎಂದು ಹೇಳಿದರು.
ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ ಹಾಗೂ ಕ್ಯಾಂಪಸ್ ನಿರ್ದೇಶಕ ಡಾ. ಆ್ಯಂಟನಿ ಪ್ರಕಾಶ್ ಮೊಂತೆರೊ ಮಾತನಾಡಿ, ವಿದ್ಯಾರ್ಥಿ ಸಂಘವು ಶಿಕ್ಷಣ ಸಂಸ್ಥೆಯ ಧ್ಯೇಯೋದ್ದೇಶಗಳ ಈಡೇರಿಕೆಗೆ ಸದಾ ಉತ್ಸುಕತೆಯಿಂದ ಕಾರ್ಯ ನಿರ್ವಹಿಸಬೇಕು. ಶಿಸ್ತು, ಬದ್ಧತೆ ಮತ್ತು ಸತತ ಶ್ರಮ ಜೊತೆ ಸೇರಿದಾಗ ಯಶಸ್ಸು ನಮ್ಮ ಪಾಲಿನದ್ದಾಗುತ್ತದೆ ಎಂದರು.
ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಸಂಚಾಲಕ ಆಲ್ಫ್ರೆಡ್ ಜೆ ಪಿಂಟೊ ಮಾತನಾಡಿ, ಯುವ ಜನತೆಯು ಉತ್ತಮ ಭಾವನೆಗಳನ್ನು ಹೊಂದಿರಬೇಕು. ರಾಜಕೀಯರಹಿತ ತತ್ವಾದರ್ಶಗಳು ತುಂಬಿದಾಗ ಸಮಾಜದಲ್ಲಿ ನೆಮ್ಮದಿಯ ವಾತಾವರಣ ನಿರ್ಮಾಣಗೊಳ್ಳಬಲ್ಲುದು ಎಂದು ಹೇಳಿದರು.
ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೊ ನೊರೊನ್ಹಾ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ರಂಗ ಕಲಾ ಸಂಘದ ಸದಸ್ಯರು ಪ್ರಾರ್ಥಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ನಿತಿನ್ ಎಚ್ ಆರ್ ಸ್ವಾಗತಿಸಿದರು. ಕಾರ್ಯದರ್ಶಿ ಅಬ್ದುಲ್ ರಝಾಕ್ ಅತಿಥಿಗಳನ್ನು ಪರಿಚಯಿಸಿದರು. ಜೊತೆ ಕಾರ್ಯದರ್ಶಿ ಸುಜ್ಞಾ ಎಸ್ ರೈ ವಂದಿಸಿದರು. ಸೌಮ್ಯ ಪಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಕೆ ಚಂದ್ರಶೇಖರ್ ಮತ್ತು ಕೇಮಪಾಲನಾಧಿಕಾರಿ ಭಾರತಿ ಎಸ್ ರೈ ಕಾರ್ಯಕ್ರಮ ಸಂಯೋಜಿಸಿದರು.









