ಹಿಂದು ಕಾರ್ಯಕರ್ತರ ಮೇಲೆ ಹೇರಿರುವ ಕೇಸ್ ಹಿಂಪಡೆಯಲು ಶಾಸಕಿ ರೂಪಾಲಿ ನಾಯ್ಕರಿಂದ ಸಿಎಂಗೆ ಮನವಿ : ಮುಖ್ಯಮಂತ್ರಿಗಳಿಂದ ಸಕಾರಾತ್ಮಕ ಸ್ಪಂದನೆ – ಕಹಳೆ ನ್ಯೂಸ್

ಬೆಂಗಳೂರು: 2017ರ ಡಿಸೆಂಬರ್ ತಿಂಗಳಿನಲ್ಲಿ ಉತ್ತರಕನ್ನಡ ಜಿಲ್ಲೆಯ, ಹೊನ್ನಾವರ ತಾಲ್ಲೂಕಿನ, ಪರೇಶ ಮೇಸ್ತಾ ಎಂಬ ಯುವಕನ ಸಾವಿನ ವಿಷಯಕ್ಕೆ ಸಂಬಂಧಿಸಿದಂತೆ, ಪ್ರತಿಭಟಿಸಿದ್ದ ಅನೇಕ ಹಿಂದೂ ಕಾರ್ಯಕರ್ತರ ಮೇಲೆ ಕ್ರಿಮಿನಲ್ ಹಾಗೂ ಸಾಮಾಜಿಕ ಜಾಲತಾಣಕ್ಕೆ ಸಂಬಂಧಿಸಿದಂತೆ, 150 ಕ್ಕೂ ಹೆಚ್ಚೂ ಪ್ರಕರಣಗಳು ದಾಖಲಾಗಿದ್ದವು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2000ಕ್ಕೂ ಅಧಿಕ ಹಿಂದೂ ಯುವಕರ ಮೇಲೆ ಹೇರಿರುವ ಪ್ರಕರಣವನ್ನು ಹಿಂಪಡೆಯುವಂತೆ ಕೋರಿ, ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀಮತಿ ರೂಪಾಲಿ ಎಸ್. ನಾಯ್ಕರವರು, ಕರ್ನಾಟಕದ ನೂತನ ಮುಖ್ಯಮಂತ್ರಿಗಳಾದ ಶ್ರೀ ಬಿ. ಎಸ್. ಯಡಿಯೂರಪ್ಪರವರಲ್ಲಿ ದಿನಾಂಕ 29/07/2019 ರಂದು ಭೋಜನ ವಿರಾಮದ ಸಂದರ್ಭದಲ್ಲಿ ಮನವಿ ಸಲ್ಲಿಸಿದ್ದಾರೆ. ಮನವಿಗೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿದುಬಂದಿದೆ.










