
ಮೈಸೂರು: ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವ ಸಾರಾ ಮಹೇಶ್ ಅವರಿಗೆ ಬೆದರಿಕೆ ಹಾಕಿದ ಆರೋಪದ ಮೇರೆಗೆ ಹುಣಸೂರು ತಾಲೂಕು ಯುವ ಜೆಡಿಎಸ್ ಅಧ್ಯಕ್ಷ ಲೋಕೇಶ್ ಎಸ್ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಅಮಾನತು ಮಾಡಲಾಗಿದೆ.
ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಇವರನ್ನು ಅಮಾನತು ಮಾಡಲಾಗಿದೆ ಎಂದು ಹೇಳಲಾಗಿದ್ದು, ತಾಲೂಕು ಜೆಡಿಎಸ್ ಮುಖ್ಯಸ್ಥ ಎಚ್ ಬಿ ಮಹಾದೇವಗೌಡ ಹೊರಡಿಸಿರುವ ಆದೇಶದಲ್ಲಿಯೂ ಇದನ್ನು ದೃಢಪಡಿಸಲಾಗಿದೆ.
ಹುಣಸೂರು ಶಾಸಕ ಹೆಚ್ ವಿಶ್ವನಾಥ್ ಅವರಿಗೆ ಬೆಂಬಲ ನೀಡುವುದಾಗಿ ದೂರವಾಣಿಯಲ್ಲಿ ಸಾರಾ ಮಹೇಶ್‍ಗೆ ಲೋಕೇಶ್ ಹೇಳಿದ್ದರಿಂದ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ ಎಂದು ಹೇಳಲಾಗಿದೆ. ಅವರಿಬ್ಬರ ನಡುವಿನ ದೂರವಾಣಿ ಸಂಭಾಷಣೆಯ ಆಡಿಯೋ ಧ್ವನಿ ಮುದ್ರಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಶಾಸಕರುಗಳ ಪೈಕಿಯಲ್ಲಿ ಎಚ್ ವಿಶ್ವನಾಥ್ ಕೂಡಾ ಒಬ್ಬರಾಗಿದ್ದಾರೆ.









