
ಕಾಸರಗೋಡು: ಮೋದಿ ಎರಡನೇ ಬಾರಿಗೆ ಪ್ರಧಾನಿಯಾದ ಬಳಿಕ ಮೊದಲ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ದ್ವೀಪರಾಷ್ಟ್ರ ಶ್ರೀಲಂಕಾ, ಮಾಲ್ಡೀವ್ಸ್ ಗೆ ಮೋದಿ ಭೇಟಿ ನೀಡಲಿದ್ದು, ಇದಕ್ಕಿಂತ ಮೊದಲು ಕೇರಳದ ಗುರುವಾಯೂರು ಶ್ರೀಕೃಷ್ಣ ಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ.
ಇಂದು ಗುರುವಾಯೂರು ಶ್ರೀಕೃಷ್ಣನಿಗೆ ತಾವರೆ ಹೂವಿನಿಂದ ತುಲಾಭಾರ ಸೇವೆ ಮಾಡಲಿದ್ದಾರೆ. ಇದಕ್ಕಾಗಿ 112 ಕೆಜಿ ತಾವರೆ ಹೂವುಗಳನ್ನು ಸಿದ್ಧಪಡಿಸಿಟ್ಟುಕೊಳ್ಳಲಾಗಿದೆ.
ಗುರುವಾಯೂರು ದೇವಸ್ಥಾನ ಅಧಿಕಾರಿಗಳು ತುಲಾಭಾರಕ್ಕಾಗಿ ಅಗತ್ಯವಿರುವ ತಾವರೆ ಹೂವುಗಳನ್ನು ತಮಿಳುನಾಡಿನ ನಾಗರಕೋಯಿಲ್ ನಿಂದ ತರಿಸಿದ್ದಾರೆ. 2008 ರ ಜನವರಿಯಲ್ಲಿ ಮೋದಿ ಗುರುವಾಯೂರು ಕ್ಷೇತ್ರಕ್ಕೆ ಆಗಮಿಸಿ ತಾವರೆ ಹೂವಿನಿಂದ ತುಲಾಭಾರ ಸೇವೆ ಮಾಡಿದ್ದರು. ಆಗ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದರು. ಇಂದು ಪ್ರಧಾನಿಯಾಗಿ ಗುರುವಾಯೂರು ಶ್ರೀಕೃಷ್ಣನಿಗೆ ತಾವರೆಯ ತುಲಾಭಾರ ನೆರವೇರಿಸಲಿದ್ದಾರೆ.








