ಪ್ಲಾಸ್ಟಿಕ್ ಗೋಡೌನ್ನಲ್ಲಿ ಅಗ್ನಿ ಅವಘಡ : ಗೋಡೆ ಹಾರಿ ಜೀವ ಉಳಿಸಿಕೊಂಡ ಬೆಂಗಳೂರಿನ ಪಿಜಿ ಯುವತಿಯರು -ಕಹಳೆ ನ್ಯೂಸ್

ನಂದಿನಿ ಲೇಔಟ್ ವ್ಯಾಪ್ತಿಯ ಪ್ಲಾಸ್ಟಿಕ್ ಗೋಡೌನ್ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಪ್ಲಾಸ್ಟಿಕ್ ವಸ್ತುಗಳಿದ್ದ ಕಾರಣ ಬೆಂಕಿ ಕ್ಷಣಾರ್ಧದಲ್ಲಿ ಅಕ್ಕಪಕ್ಕದ ಮನೆಗಳಿಗೆ ವ್ಯಾಪಿಸಿದೆ. ಬೆಂಕಿಯ ತೀವ್ರತೆಗೆ ಮನೆಯ ಮುಂಭಾಗದ ಮರಗಳು ಹಾಗೂ ಕಬ್ಬಿಣದ ಗೇಟ್ಗಳು ಕೂಡ ಹೊತ್ತಿ ಉರಿದಿವೆ.
ಗೋಡೆ ಹಾರುವ ಮತ್ತು ಜಿಗಿಯುವ ಸಂದರ್ಭದಲ್ಲಿ ಕೆಲವು ಯುವತಿಯರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು.
ಗೋಡೌನ್ನಲ್ಲಿ ಸಂಭವಿಸಿದ ಬೆಂಕಿ ಅವಘಡದ ಬೆನ್ನಲ್ಲೇ ಈಗ ಮಾಲೀಕ ಮತ್ತು ಸ್ಥಳೀಯ ನಿವಾಸಿಗಳ ನಡುವೆ ಭಾರೀ ಗಲಾಟೆ ಶುರುವಾಗಿದೆ. ಬೆಂಕಿಯ ಅಬ್ಬರಕ್ಕೆ ತಮ್ಮ ಆಸ್ತಿಪಾಸ್ತಿ ಕಳೆದುಕೊಂಡ ಅಕ್ಕಪಕ್ಕದ ನಿವಾಸಿಗಳು ಗೋಡೌನ್ ಮಾಲೀಕನ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಬೆಂಕಿ ಮನೆಗಳಿಗೆ ಆವರಿಸಿದ್ದರಿಂದ ಗೇಟ್, ಕಿಟಕಿ ಹಾಗೂ ಮನೆಯ ಮುಂಭಾಗದ ವಸ್ತುಗಳು ಸುಟ್ಟು ಕರಕಲಾಗಿವೆ. “ನಿಮ್ಮ ಬೇಜವಾಬ್ದಾರಿಯಿಂದ ನಮ್ಮ ಮನೆಗಳಿಗೆ ಹಾನಿಯಾಗಿದೆ, ನಮಗೆ ತಕ್ಷಣ ಪರಿಹಾರ ಕೊಡಿಸಿ” ಎಂದು ನಿವಾಸಿಗಳು ಮಾಲೀಕನನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.









