
ಪುತ್ತೂರು ಉಪವಿಭಾಗದಲ್ಲಿ ಸಹಾಯಕ ಕಮೀಷನರ್ ಆಗಿ ಕರ್ತವ್ಯ ನಿರ್ವಹಿಸಿದ್ದ ಮಡಿಕೇರಿ ನಿವಾಸಿ ಡಾ.ಕೆ.ಅಪ್ಪಯ್ಯ ಕೆ.ಎ.ಎಸ್ ಅವರು ಜೂ.4ರಂದು ಮಡಿಕೇರಿ ಕುಶಾಲನಗರದ ತೊರೆನೂರಿನಲ್ಲಿ ಅಪಘಾತಗೊಂಡು ಮೃತಪಟ್ಟಿದ್ದಾರೆ. ಕುಶಾಲನಗರ ತೊರೆನೂರಿನಲ್ಲಿ ಲಾರಿ ಮತ್ತು ಕಾರು ನಡುವೆ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಮುರ್ನಾಡು ನಿವಾಸಿ ಕರ್ನಾಯ ಡಾ.ಕೆ ಅಪ್ಪಯ್ಯ ಅವರು ತೀವ್ರ ಹಾನಿಗೊಂಡು ಸಾವನ್ನಪ್ಪಿದ್ದಾರೆ.
ಅವರ ಪತ್ನಿಗೆ ತೀವ್ರ ಗಾಯಗೊಂಡಿದ್ದು ಅವರನ್ನು ಮೈಸೂರು ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಕುಶಾಲನಗರ ಪೊಲೀಸ್ ಇನ್‍ಸ್ಪೆಕ್ಟರ್ ದಿನೇಶ್ ತನಿಖೆ ನಡೆಸುತ್ತಿದ್ದಾರೆ. ಡಾ.ಅಪ್ಪಯ್ಯ ಅವರು 2006 ಜೂ.27 ರಿಂದ 2007 ಜೂ. 2ರ ತನಕ ಪುತ್ತೂರಿನಲ್ಲಿ ಸಹಾಯಕ ಕಮೀಷನರ್ ಆಗಿ ಕರ್ತವ್ಯ ನಿರ್ವಹಿಸಿ ನಂತರ ಎಡಿಸಿಯಾಗಿ ವರ್ಗಾವಣೆಗೊಂಡಿದ್ದರು. ಈ ನಡುವೆ ಅವರು ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿ ಕಚೇರಿಯಲ್ಲಿ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದ್ದರು.









