Monday, April 27, 2026
ಸುದ್ದಿ

ಪಾಣೆಮಂಗಳೂರು ಸೇತುವೆಯ ಬಳಿ ಇಕ್ಕೆಲಗಳಲ್ಲಿ ರಾಶಿ ರಾಶಿ ಕಸ – ಕಹಳೆ ನ್ಯೂಸ್

ಬಂಟ್ವಾಳ: ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಪಾಣೆಮಂಗಳೂರು ಸೇತುವೆಯ ಬಳಿಯಲ್ಲಿ ರಾಶಿ ರಾಶಿ ಕಸ ತ್ಯಾಜ್ಯಗಳು ತುಂಬಿಕೊಂಡು ದುರ್ವಾಸನೆ ಬೀರುತ್ತಿದೆ. ರಾಷ್ಟ್ರೀಯ ಹೆದ್ದಾರಿಯ ಎರಡು ಬದಿಯಲ್ಲಿ ದಿಬ್ಬದ ರೀತಿಯಲ್ಲಿ ಕಸ, ತ್ಯಾಜ್ಯ ರಾಶಿಯಾಗಿದ್ದು ಇದನ್ನು ವಿಲೇವಾರಿ ಮಾಡುತ್ತಿಲ್ಲ. ಅನೇಕ ದಿನಗಳಿಂದ ತ್ಯಾಜ್ಯ ಕೊಳೆತು ನಾರುತ್ತಿದೆ.
ಬಿಸಿರೋಡಿನಿಂದ ಮೆಲ್ಕಾರ್ ಕಡೆಗೆ ಹೋಗುವ ವೇಳೆ ಪಾಣೆಮಂಗಳೂರು ಹೊಸ ಸೇತುವೆ ದಾಟಿದ ಕೂಡಲೇ ರಸ್ತೆಯ ಇಕ್ಕೆಲಗಳಲ್ಲಿ ಹಾಳೆ ಬಟ್ಟಲು, ಕೊಳೆತ ತ್ಯಾಜ್ಯ, ಪ್ಲಾಸ್ಟಿಕ್, ಹೀಗೆ ಇಲ್ಲಿ ಏನುಂಟು ಏನಿಲ್ಲ ಎಂದು ಹೇಳಲು ಅಸಾಧ್ಯ. ಆದರೆ ರಾಶಿ ಹಾಕಿದ ಕಸವನ್ನು ವಿಲೇವಾರಿ ಮಾಡಲು ಸಂಬಂಧಿಸಿದ ಇಲಾಖೆ ಮುಂದಾಗುತ್ತಿಲ್ಲ. ಕಾರಣ ಇಷ್ಟೇ ಈ ಭಾಗ ಯಾರಿಗೆ ಸೇರಿದ್ದು ಎಂಬುವುದು ನಿರ್ಧಾರವಾಗಿಲ್ಲ. ಕಸ ಹಾಕುತ್ತಿರುವ ಪ್ರದೇಶ ಬಂಟ್ವಾಳ ಪುರಸಭೆ ಮತ್ತು ನರಿಕೊಂಬು ಗ್ರಾಮ ಪಂಚಾಯತ್‍ನ ಮಧ್ಯ ಭಾಗವಾಗಿರುವುದರಿಂದ ಇಲ್ಲಿ ಗಡಿ ವಿವಾದ ಉಂಟಾಗಿದೆ. ಪುರಸಭೆ ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಕೈ ಜಾರಿಸಿದರೆ, ಇತ್ತ ನರಿಕೊಂಬು ಗ್ರಾಮ ಪಂಚಾಯತ್ ಇದು ನಮ್ಮದಲ್ಲ ಪುರಸಭೆಯದ್ದು ಎಂದು ಹೇಳಿ ಸುಮ್ಮನೆ ಕುಳಿತುಕೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಇವರಿಬ್ಬರ ಕೊಳಿ ಜಗಳದಿಂದ ಇಕ್ಕಟ್ಟಿಗೆ ಸಿಲುಕಿದ್ದು ರಾಶಿಯಾದ ತ್ಯಾಜ್ಯ. ರಾಷ್ಟ್ರೀಯ ಹೆದ್ದಾರಿ ಅಗಿರುವುದರಿಂದ ಈ ಭಾಗದಲ್ಲಿ ಕಸವನ್ನು ಬೇಕಾಬಿಟ್ಟಿ ಎಸೆದು ಹೋಗುವುದು ತಪ್ಪು ಅಂತ ಕಸ ಎಸೆಯುವವರಿಗೆ ಯಾಕೆ ಮನವರಿಕೆ ಅಗುತ್ತಿಲ್ಲ ಎಂಬುದು ಕೂಡಾ ಇಲ್ಲಿ ಅತ್ಯಂತ ಪ್ರಮುಖ ಪ್ರಶ್ನೆಯಾಗಿದೆ.

ಸ್ವಚ್ಛತೆಯ ಬಗ್ಗೆ ಸಾಕಷ್ಟು ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸಿದ್ದರೂ ಪದೆ ಪದೇ ರಸ್ತೆಯಲ್ಲಿ ಕಸ ಎಸೆಯುವುದು ಸರಿಯಾ ಎಂಬ ಪ್ರಶ್ನೆ ಮಾಡಬೇಕಾಗಿದೆ. ಪರಿಸರ ಸಂರಕ್ಷಣೆ ಮತ್ತು ಆರೋಗ್ಯ ಕಾಪಾಡುವಲ್ಲಿ ಸರಕಾರ ಇಲಾಖೆ ಜೊತೆಗೆ ಸಾರ್ವಜನಿಕರ ಪಾತ್ರ ಕೂಡಾ ಹಿರಿದಾಗಿದೆ. ಸ್ವಚ್ಚತೆಯ ಪ್ರಶ್ನೆ ಬಂದಾಗ ಪ್ರತಿಯೊಬ್ಬರೂ ಕೈಜೋಡಿಸಬೇಕಾಗಿದೆ. ಮಳೆಗಾಲ ಆರಂಭವಾಗುವ ಸಂಧರ್ಭದಲ್ಲಿ ಈ ರೀತಿಯಲ್ಲಿ ಕಸ ಬೀಸಾಡುವುದು ಸರಿಯಲ್ಲ, ಮಳೆ ನೀರಿಗೆ ಕೊಳೆತು ಸೊಳ್ಳೆ ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಗಳು ಇವೆ. ಹಾಗಾಗಿ ಕಸ ಎಸೆಯುವ ಸಾರ್ವಜನಿಕರು ಎಚ್ಚರವಹಿಸಬೇಕು ಮತ್ತು ಪುರಸಭಾ ವ್ಯಾಪ್ತಿಯಲ್ಲಿ ರಾಶಿ ಬಿದ್ದಿರುವ ಕಸಗಳನ್ನು ದಿನೇ ದಿನೇ ವಿಲೇವಾರಿ ಮಾಡುವ ಬಗ್ಗೆ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂಬುದೇ ಜನ ಆಗ್ರಹ.