
ಉಡುಪಿ: ಜಿಲ್ಲೆಯಲ್ಲಿ ಮಂಗನ ಕಾಯಿಲೆ ಭೀತಿಯು ಹೆಚ್ಚಾಗುತ್ತಲಿದ್ದು, ಸುಮಾರು ಆರು ಮಂಗಗಳ ಶವವು ಜಿಲ್ಲೆಯ ವಿವಿಧೆಡೆಗಳಲ್ಲಿ ದೊರಕಿದೆ.
ಉಡುಪಿ ಜಿಲ್ಲೆಯ ಮಂಡಾಡಿ, ಹರ್ಲಾಳಿ, ಕಾವ್ರಾಡಿ, ಬೆಳ್ವೆ, ಶೇಡಿಮನೆ, ಕುಕ್ಕೆಹಳ್ಳಿಯಲ್ಲಿ ತಲಾ ಒಂದು ಸೇರಿದಂತೆ ಒಟ್ಟು ಆರು ಮಂಗಗಳ ಶವವು ಪತ್ತೆಯಾಗಿದೆ ಎಂದು ವರದಿಗಳು ತಿಳಿಸಿವೆ.
ಉಡುಪಿ ಜಿಲ್ಲೆಯಲ್ಲಿ ಇದುವೆರೆಗೆ ಆರು ಮಂದಿ ಸಂಶಯಾಸ್ಪದ ಮಂಗನಕಾಯಿಲೆ ತಪಾಸಣೆಗಾಗಿ ದಾಖಲಾಗಿದ್ದಾರೆ. ಆದರೆ ಯಾರಲ್ಲೂ ಮಂಗನಕಾಯಿಲೆಯು ಕಂಡುಬಂದಿಲ್ಲ. ಮೃತಪಟ್ಟ ಮಂಗಗಳಲ್ಲಿ ಎರಡು ಶವಗಳ ಮಾದರಿಯನ್ನು ಶಿವಮೊಗ್ಗ ಮತ್ತು ಮಣಿಪಾಲಕ್ಕೆ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ.
ಇದುವರೆಗೆ 28 ಮಂಗಗಳ ಮಾದರಿಗಳನ್ನು ಕಳುಹಿಸಲಾಗಿದೆ. ಇದರಲ್ಲಿ 21 ಮಾದರಿ ವರದಿ ಬಂದಿದೆ ಮತ್ತು 12 ಮಾದರಿಗಳಲ್ಲಿ ಮಂಗನ ಕಾಯಿಲೆ ಪತ್ತೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.











