
ಮೂಡ್ಲಕಟ್ಟೆ ಐಎಂಜೆ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ‘ನವೋನ್ಮೇಶ’ ರಾಜ್ಯ ಮಟ್ಟದ ವಿಜ್ಞಾನ, ವಾಣಿಜ್ಯ, ಸಾಂಸ್ಕೃತಿಕ ಹಾಗೂ ಕ್ರೀಡಾ ಉತ್ಸವದ ಉದ್ಘಾಟನಾ ಸಮಾರಂಭವು ಅದ್ದೂರಿಯಾಗಿ ನೆರವೇರಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತರಾದ ಶ್ರೀಮತಿ ರಶ್ಮಿ ಎಸ್. ಆರ್. ಭಾಗವಹಿಸಿ ದೀಪ ಬೆಳಗಿಸಿ ಉತ್ಸವಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, “ವಿದ್ಯಾರ್ಥಿ ಜೀವನದಲ್ಲಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳೂ ಅತ್ಯಂತ ಅವಶ್ಯಕ. ‘ನವೋನ್ಮೇಶ’ದಂತಹ ವೇದಿಕೆಗಳು ವಿದ್ಯಾರ್ಥಿಗಳಲ್ಲಿ ಅಡಗಿರುವ ನಾಯಕತ್ವ ಗುಣ ಹಾಗೂ ಕೌಶಲ್ಯಗಳನ್ನು ಬೆಳೆಸಲು ಸಹಾಯ ಮಾಡುತ್ತವೆ. ಯುವಜನತೆ ತಮಗೆ ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು” ಎಂದು ಕಿವಿಮಾತು ಹೇಳಿದರು.
ಗೌರವ ಅತಿಥಿಯಾಗಿ ಪಾಲ್ಗೊಂಡಿದ್ದ ಖ್ಯಾತ ಚಲನಚಿತ್ರ ನಟ ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ಅವರು ಮಾತನಾಡಿ, “ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ವಿಶೇಷ ಪ್ರತಿಭೆ ಇದ್ದೇ ಇರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಇಂತಹ ಉತ್ಸವಗಳಿಂದಾಗುತ್ತದೆ. ವಿದ್ಯಾರ್ಥಿಗಳು ಯಾವುದೇ ಅಂಜಿಕೆ ಇಲ್ಲದೆ ಮುಕ್ತವಾಗಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬೇಕು ಹಾಗೂ ತಮ್ಮ ಆಸಕ್ತಿಯ ಕ್ಷೇತ್ರಗಳಲ್ಲಿ ಸಾಧನೆ ಮಾಡಬೇಕು. ಸತತ ಪರಿಶ್ರಮವಿದ್ದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಖ್ಯಾತ ಚಲನಚಿತ್ರ ನಟ ವಜ್ರಂಗ್ ಶೆಟ್ಟಿ ಅವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೋರಿದ ಉತ್ಸಾಹವನ್ನು ಶ್ಲಾಘಿಸಿದರು ಮತ್ತು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಶುಭಕೋರಿದರು.
ಈ ಬಾರಿಯ ‘ನವೋನ್ಮೇಶ’ ಫೆಸ್ಟ್ನಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಮಂಗಳೂರಿನ ಕೆನರಾ ವಿಕಾಸ್ ಪಿಯು ಕಾಲೇಜಿನ ತಂಡವು ಸಮಗ್ರ ಚಾಂಪಿಯನ್ (Winner) ಪಟ್ಟವನ್ನು ಮುಡಿಗೇರಿಸಿಕೊಂಡಿತು. ಉಡುಪಿಯ ಎಂಜೆಎಂ ಪಿಯು ಕಾಲೇಜಿನ ತಂಡವು ಪ್ರಥಮ ರನ್ನರ್ ಅಪ್ ಹಾಗೂ ಕುಂದಾಪುರದ ಶ್ರೀ ವೆಂಕಟರಮಣ ಪಿಯು ಕಾಲೇಜ್ ದ್ವಿತೀಯ ರನ್ನರ್ ಅಪ್ ಪ್ರಶಸ್ತಿಗೆ ಭಾಜನರಾದರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಐಎಂಜೆ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ನಿರ್ದೇಶಕ ಡಾ. ಎಸ್. ಎನ್. ಭಟ್ ಅವರು, “ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ಪ್ರತಿಭೆಗಳನ್ನು ಗುರುತಿಸಿ ಹೊರತರಲು ಇಂತಹ ಅಂತರ್ ಕಾಲೇಜು ಉತ್ಸವಗಳು ಉತ್ತಮ ವೇದಿಕೆಯಾಗುತ್ತವೆ. ಸ್ಪರ್ಧೆಗಳಲ್ಲಿ ಕೇವಲ ಗೆಲುವಿಗಾಗಿ ಶ್ರಮಿಸುವುದಕ್ಕಿಂತ, ಸಕ್ರಿಯವಾಗಿ ಭಾಗವಹಿಸುವಿಕೆ ಮತ್ತು ಹೊಸ ವಿಷಯಗಳನ್ನು ಕಲಿಯುವ ಉತ್ಸಾಹ ಬಹಳ ಮುಖ್ಯ” ಎಂದು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ತಿಳಿಸಿದರು.
ಎಂಐಟಿಕೆ ಪ್ರಾಂಶುಪಾಲರಾದ ಡಾ. ರಾಮಕೃಷ್ಣ ಹೆಗ್ಡೆ ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ನವೋನ್ಮೇಶದ ರೂಪುರೇಶೆಗಳನ್ನು ವಿವರಿಸಿ ಅತಿಥಿಗಳನ್ನು ಸ್ವಾಗತಿಸಿದರು. ಎಂಸಿಎನ್ ಪ್ರಾಂಶುಪಾಲೆ ಪ್ರೊ. ಜೆನ್ನಿಫರ್ ಫ್ರೀಡಾ ಮೆನೆಜಸ್ ವಂದಿಸಿದರು. ಸಮಾರೋಪ ಸಮಾರಂಭದಲ್ಲಿ ಐಎಂಜೆಐಎಸ್ಸಿ ಪ್ರಾಂಶುಪಾಲೆ ಡಾ. ಪ್ರತಿಭಾ ಎಂ. ಪಟೇಲ್ ವರದಿ ವಾಚಿಸಿ ಧನ್ಯವಾದ ಸಮರ್ಪಿಸಿದರು. ಐಎಂಜೆಸಿಎಹೆಚ್ಎಸ್ ಪ್ರಾಂಶುಪಾಲೆ ಪ್ರೊ. ಹೇಮಲತಾ ಸ್ವಾಗತಿಸಿದರು. ವಿವಿಧ ಕಾಲೇಜುಗಳಿಂದ ಆಗಮಿಸಿದ ನೂರಾರು ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಈ ಸಂದರ್ಭದಲ್ಲಿ ಹಾಜರಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾ ಸಂಯೋಜಕಿ ಪ್ರೊ. ಸೂಕ್ಷ್ಮ ಅಡಿಗ ಹಾಗೂ ಇಂಗ್ಲೀಶ್ ಪ್ರಾಧ್ಯಾಪಕಿ ಪ್ರೊ.ರಾಜೇಶ್ವರಿ ಶೆಟ್ಟಿ ಹಾಗೂ ಎಮ್ ಸಿ ಎನ್ ಉಪಪ್ರಾಂಶುಪಾಲೆ ಪ್ರೊ.ರೂಪಶ್ರೀ ಅತಿಥಿ ಪರಿಚಯ ನೀಡಿದರು. ವಿಧ್ಯಾರ್ಥಿನಿಯರಾದ ಮೋಕ್ಷ ಹಾಗೂ ಸಂತೃಪ್ತಿ ಹಾಗೂ ಅಲಿಶಾ ಬಿಷಪ್ ಕಾರ್ಯಕ್ರಮ ನಿರೂಪಿಸಿದರು.










