
ನವದೆಹಲಿ : 2029ರ ಡಿಸೆಂಬರ್ 31ರೊಳಗೆ ಭಾರತವನ್ನು ಸಂಪೂರ್ಣ ಮಾದಕ ವಸ್ತು ಮುಕ್ತ ದೇಶವನ್ನಾಗಿ ರೂಪಿಸುವ ಗುರಿಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ. ಮಾದಕ ವಸ್ತುಗಳ ಜಾಲವನ್ನು ಬುಡಸಮೇತ ಕಿತ್ತೊಗೆಯಲು ಕೇಂದ್ರ ಸರ್ಕಾರ ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ಎಲ್ಲಾ ರಾಜ್ಯಗಳ ಪೊಲೀಸ್ ಪಡೆಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದು ಅವರು ಕರೆ ನೀಡಿದ್ದಾರೆ.
ನವದೆಹಲಿಯ ರಾಷ್ಟ್ರೀಯ ಪೊಲೀಸ್ ಸ್ಮಾರಕದಲ್ಲಿ ನಡೆದ ಪೊಲೀಸ್ ಸ್ಮರಣಾರ್ಥ ದಿನದ ಕಾರ್ಯಕ್ರಮದಲ್ಲಿ ಹುತಾತ್ಮ ಪೊಲೀಸ್ ಸಿಬ್ಬಂದಿಗೆ ಪುಷ್ಪಗುಚ್ಛ ಅರ್ಪಿಸಿ ಗೌರವ ಸಲ್ಲಿಸಿದ ಬಳಿಕ ಮಾತನಾಡಿದ ಅಮಿತ್ ಶಾ, ದೇಶದ ಆಂತರಿಕ ಭದ್ರತೆ ಕಾಪಾಡುವಲ್ಲಿ ಪೊಲೀಸ್ ಪಡೆಗಳು ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (ಸಿಎಪಿಎಫ್) ಕೊಡುಗೆಯನ್ನು ಶ್ಲಾಘಿಸಿದರು.
ಮಾದಕ ವಸ್ತು ಮುಕ್ತ ಭಾರತದ ಗುರಿ ಸಾಧಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಮನ್ವಯ ಅಗತ್ಯವಾಗಿದೆ. ಪೊಲೀಸ್ ಇಲಾಖೆಗಳು ಗುಪ್ತಚರ ಮಾಹಿತಿ ಹಂಚಿಕೆ, ಕಳ್ಳಸಾಗಣೆ ಜಾಲಗಳ ಪತ್ತೆ ಹಾಗೂ ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಹೆಚ್ಚಿನ ಪರಿಣಾಮಕಾರಿತ್ವ ಸಾಧಿಸಬೇಕು ಎಂದು ಅವರು ಒತ್ತಿಹೇಳಿದರು. ಕಳೆದ ಮೂರು ದಶಕಗಳಿಂದ ದೇಶದ ಆಂತರಿಕ ಭದ್ರತೆಗೆ ಸವಾಲಾಗಿದ್ದ ಜಮ್ಮು-ಕಾಶ್ಮೀರದ ಭಯೋತ್ಪಾದನೆ, ಈಶಾನ್ಯ ರಾಜ್ಯಗಳಲ್ಲಿನ ಅಶಾಂತಿ ಮತ್ತು ನಕ್ಸಲ್ ಸಮಸ್ಯೆಯನ್ನು ನಿಯಂತ್ರಿಸುವಲ್ಲಿ ಭದ್ರತಾ ಪಡೆಗಳು ಮಹತ್ವದ ಸಾಧನೆ ಮಾಡಿವೆ ಎಂದು ಗೃಹ ಸಚಿವರು ಹೇಳಿದರು. ಶಾಂತಿ ಒಪ್ಪಂದಗಳು, ಭದ್ರತಾ ಪಡೆಗಳ ನಿರಂತರ ಕಾರ್ಯಾಚರಣೆ ಮತ್ತು ಸಿಬ್ಬಂದಿಯ ಕಠಿಣ ಪರಿಶ್ರಮದಿಂದ ಹಲವು ಪ್ರದೇಶಗಳಲ್ಲಿ ಶಾಂತಿ ನೆಲೆಸಿದೆ. ನಕ್ಸಲಿಸಂ ನಿರ್ಮೂಲನೆಯ ನಿಟ್ಟಿನಲ್ಲಿಯೂ ಪ್ರಗತಿ ಸಾಧಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ದೇಶದ ಭದ್ರತೆ ಮತ್ತು ಜನರ ಸುರಕ್ಷತೆಗಾಗಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಪ್ರಾಣ ತ್ಯಾಗ ಮಾಡಿದ ಪೊಲೀಸ್ ಸಿಬ್ಬಂದಿ ಹಾಗೂ ಸಿಎಪಿಎಫ್ ಯೋಧರ ಸೇವೆಯನ್ನು ಅಮಿತ್ ಶಾ ಸ್ಮರಿಸಿದರು. ಅವರ ತ್ಯಾಗ ಮತ್ತು ಸಮರ್ಪಣೆಯಿಂದಲೇ ಭಾರತವು ಭದ್ರ ರಾಷ್ಟ್ರವಾಗಿ ಮುನ್ನಡೆಯಲು ಸಾಧ್ಯವಾಗಿದೆ ಎಂದು ಕೃತಜ್ಞತೆ ವ್ಯಕ್ತಪಡಿಸಿದರು. ದೇಶದ ಭದ್ರತೆಯನ್ನು ಮತ್ತಷ್ಟು ಬಲಪಡಿಸುವುದರ ಜತೆಗೆ ಮಾದಕ ವಸ್ತುಗಳ ಹಾವಳಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಅವರು ಪುನರುಚ್ಚರಿಸಿದರು.











