
ಕಡಬ: 94ಸಿ ನಿಯಮಾವಳಿಯಡಿ ಜಮೀನು ಮಂಜೂರಾತಿ ಮಾಡಿಸಿಕೊಡುವುದಾಗಿ ನಂಬಿಸಿ ಮಹಿಳೆಯೊಬ್ಬರಿಂದ ₹3.25 ಲಕ್ಷ ಪಡೆದು ವಂಚಿಸಿ, ಜೀವ ಬೆದರಿಕೆ ಹಾಕಿರುವ ಆರೋಪದಡಿ ವ್ಯಕ್ತಿಯೊಬ್ಬರ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಡಬ ತಾಲೂಕಿನ ಶಿರಾಡಿ ಗ್ರಾಮದ ಗುಂಡ್ಯ ನಿವಾಸಿ ಸರಿತ (52) ಅವರು ನೀಡಿದ ದೂರಿನ ಮೇರೆಗೆ ಸಿಲುಬಾಗಿಲು ಗ್ರಾಮದ ದೇರಣೆ ನಿವಾಸಿ ಪದ್ಮನಾಭ ಗೌಡ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ಸರಿತ ಅವರ ಕುಟುಂಬವು ಶಿರಾಡಿ ಗ್ರಾಮದ ಗುಂಡ್ಯದ ಸರ್ವೆ ನಂಬರ್ 87/1ರ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡು ವಾಸವಾಗಿದ್ದು, ಈ ಜಮೀನನ್ನು ಸರ್ಕಾರದ 94ಸಿ ಯೋಜನೆಯಡಿ ಮಂಜೂರು ಮಾಡಿಸಿಕೊಡುವುದಾಗಿ ಆರೋಪಿ ನಂಬಿಸಿದ್ದ ಎನ್ನಲಾಗಿದೆ.
ಹಿನ್ನೆಲೆಯಲ್ಲಿ 2020ರ ಅಕ್ಟೋಬರ್ 12ರಂದು ಒಂದು ಲಕ್ಷ ರೂ. ನಗದು, ಅಕ್ಟೋಬರ್ 16ರಂದು 30 ಸಾವಿರ ರೂ. ಮೌಲ್ಯದ ಚೆಕ್, ಅಕ್ಟೋಬರ್ 25ರಂದು 95 ಸಾವಿರ ರೂ. ಮೌಲ್ಯದ ಚೆಕ್, ನವೆಂಬರ್ 14ರಂದು 10 ಸಾವಿರ ರೂ. ನಗದು ಹಾಗೂ 2025ರ ಮೇ 30ರಂದು 90 ಸಾವಿರ ರೂ. ನಗದು ಸೇರಿದಂತೆ ಹಂತ ಹಂತವಾಗಿ ಒಟ್ಟು 3.25 ಲಕ್ಷ ರೂ. ಪಡೆದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
2026ರ ಸೆಪ್ಟೆಂಬರ್ 22ರಂದು ಆರೋಪಿ ಮಹಿಳೆಯ ಮನೆಗೆ ಬಂದಿದ್ದ ಸಂದರ್ಭದಲ್ಲಿ, ಜಮೀನು ಮಂಜೂರಾತಿ ಪತ್ರ ನೀಡುವಂತೆ ಅಥವಾ ಪಡೆದ ಹಣವನ್ನು ಹಿಂದಿರುಗಿಸುವಂತೆ ಮಹಿಳೆ ಕೇಳಿದ್ದಾರೆ. ಈ ವೇಳೆ ಹಣ ಪಡೆದಿರುವುದನ್ನು ನಿರಾಕರಿಸಿದ ಆರೋಪಿ, ತಾನು ಕೆಡಿಪಿ ಸದಸ್ಯನಾಗಿದ್ದು, ಈಗ ತಮ್ಮದೇ ಸರ್ಕಾರವಿದೆ. ಯಾರಿಗಾದರೂ ದೂರು ನೀಡಿದರೆ ಮನೆಯನ್ನು ತೆರವುಗೊಳಿಸುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.
ಮಹಿಳೆಯ ಲಿಖಿತ ದೂರಿನ ಆಧಾರದ ಮೇಲೆ ಸೆಪ್ಟೆಂಬರ್ 29ರಂದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 126/2026ರ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಕಲಂ 318(4)ರಂತೆ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.










