ತುಳು ಭಾಷೆಯನ್ನು ಕರ್ನಾಟಕ ರಾಜ್ಯದ ಎರಡನೇ ಹೆಚ್ಚುವರಿ ಆಡಳಿತ ಭಾಷೆಯೆಂದು ಘೋಷಣೆ: ಸಿಎಂ ಡಿ.ಕೆ. ಶಿವಕುಮಾರ್ : ಮಂಗಳೂರಿನಲ್ಲಿ ಮೊದಲ ಬಾರಿಗೆ ಸಚಿವ ಸಂಪುಟ ಸಭೆ: 32,611 ಕೋಟಿ ರೂ. ಯೋಜನೆಗಳಿಗೆ ಅನುಮೋದನೆ – ಕಹಳೆ ನ್ಯೂಸ್

ಮಂಗಳೂರು :ಬಹುಕಾಲದಿಂದ ನಿರೀಕ್ಷೆಯಲ್ಲಿದ್ದ ಮಹತ್ವದ ತುಳು ಭಾಷೆಗೆ ಎರಡನೇ ಹೆಚ್ಚುವರಿ ಆಡಳಿತ ಭಾಷೆಯ ಸ್ಥಾನಮಾನ ಕರಾವಳಿ ಮಲೆನಾಡು ಕರ್ನಾಟಕ ಪ್ರವಾಸೋದ್ಯಮ ನೀತಿ 2026, 150 ಎಕರೆ ಪ್ರದೇಶದಲ್ಲಿ ಮೀನುಗಾರಿಕೆ ಪಾರ್ಕ್ ನಿರ್ಮಾಣ ಸೇರಿದಂತೆ 32,611 ಕೋಟಿ ರೂ. ವೆಚ್ಚದ ಯೋಜನೆಗಳಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ಮಂಗಳೂರಿನಲ್ಲಿ ಶುಕ್ರವಾರ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಸಚಿವ ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿ ನಡೆಸಿ ಈ ಕುರಿತು ಮಾಹಿತಿ ನೀಡಿದ ಸಿಎಂ ಡಿ.ಕೆ. ಶಿವಕುಮಾರ್ ಇದರಲ್ಲಿ 16,000 ಕೋಟಿ ರೂ. ಗ್ರಾಮೀಣಾಭಿವೃದ್ಧಿ ಯೋಜನೆಯಾಗಿದ್ದು, ಉಳಿದ ಮೊತ್ತ ಕರಾವಳಿ ಜಿಲ್ಲೆಗಳಿಗೆ ಸಂಬಂಧಿಸಿದೆ ಎಂದು ವಿವರಿಸಿದರು.
ಎರಡನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ತುಳು
ನಮ್ಮ ಸರ್ಕಾರ ಜನರ ಭಾವನೆಯನ್ನು ಗೌರವಿಸಿದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತುಳು ಭಾಷೆ ಎರಡನೇ ಆಡಳಿತ ಭಾಷೆಯಾಗಿ ಘೋಷಣೆಯಾಗಬೇಕೆನ್ನುವ ಬೇಡಿಕೆ ಬಹಳ ದಿನಗಳದ್ದು. ಹಿಂದಿನವರು ಈ ತೀರ್ಮಾನ ಏಕೆ ಮಾಡಲಿಲ್ಲ ಎಂದು ಚರ್ಚಿಸುವುದಿಲ್ಲ. ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆ. ಸಭೆಯಲ್ಲಿ ಅನೇಕ ಸಲಹೆಗಳು ಬಂದಿವೆ.
ಬದ್ಧತೆ ಇರುವ ಸರ್ಕಾರ
ನಮಗೆ ಬದ್ಧತೆ ಇದೆ. ನಾವು ಜನರ ಭಾವನೆ ಮೇಲಲ್ಲ; ಬದುಕಿನ ಮೇಲೆ ರಾಜಕಾರಣ ಮಾಡುತ್ತೇವೆ. ಭಾವನೆಗಳ ಆಧಾರದ ಮೇಲೆ ಸಮಾಜ ಕಟ್ಟಲ್ಲ. ಸಾಮಾಜಿಕ ಆರ್ಥಿಕ ಶಕ್ತಿ ತುಂಬಿ ಬದುಕು ಕಟ್ಟಿಕೊಡಲಾಗುವುದು ಎಂದು ತಿಳಿಸಿದರು. ಅವಶ್ಯತೆ ಇದ್ದಲ್ಲಿ ಆರ್ಥಿಕ ಹಾಗೂ ಕಾನೂನು ಚೌಕಟ್ಟು ಗಮನದಲ್ಲಿಟ್ಟುಕೊಂಡು ಮುಂದಿನ ದಿನಗಳಲ್ಲಿ ಸಚಿವ ಸಂಪುಟ ಸಭೆ ನಡೆಸುವ ತೀರ್ಮಾನ ಮಾಡಿ ಆಗ ಅಗತ್ಯವಿರುವ ವಿಚಾರಗಳ ಬಗ್ಗೆ ತೀರ್ಮಾನಿಸಲಾಗುವುದು. ಇದು ಟೀಮ್ ಕರ್ನಾಟಕ.
ಸಚಿವ ಸಂಪುಟ ನಿಮ್ಮ ಜೊತೆ ಇದೆ. ತುಳು ಭಾಷೆಯನ್ನು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಸೀಮಿತವಾಗಿ ರಾಜ್ಯದ ಹೆಚ್ಚುವರಿ ಆಡಳಿತ ಭಾಷೆಯಾಗಿ ಘೋಷಣೆ ಮಾಡಲಾಗುವುದು.
ಮಾಜಿ ಸಚಿವ ರಮಾನಾಥ ರೈ ಅವರು ತುಳು ಭಾಷೆಗೆ 2 ನೇ ಹೆಚ್ಚುವರಿ ಭಾಷೆಯಾಗಿ ಘೋಷಿಸಲು ಮೊದಲು ಬೇಡಿಕೆ ಇಟ್ಟಿದ್ದರು ಎಂದು ಸ್ಮರಿಸಿದರು. ಸಚಿವ ಯು.ಟಿ. ಖಾದರ್, ಶಾಸಕ ಅಶೋಕ್ ಕುಮಾರ್ ರೈ ಸೇರಿದಂತೆ ಹಲವು ಜನಪ್ರತಿನಿಧಿಗಳು ಒಟ್ಟಾಗಿ ಒತ್ತಡ ಹೇರಿದ್ದರು ಎಂದು ಅವರು ತಿಳಿಸಿದರು.
ತುಳು ಭಾಷೆ ಎರಡನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ಅಂಗೀಕರಿಸಿದ ಹಿನ್ನೆಲೆಯಲ್ಲಿ ಇದಕ್ಕಾಗಿ ಶ್ರಮಿಸಿದ ಎಲ್ಲರಿಗೂ ಮುಖ್ಯಮಂತ್ರಿಗಳು ಅಭಿನಂದಿಸಿದರು.
*ದಕ್ಷಿಣ ಕನ್ನಡಕ್ಕೆ ಮಂಗಳೂರು ಮರುನಾಮಕರಣ: ಜನಾಭಿಪ್ರಾಯ ಸಂಗ್ರಹ*
ಮಂಗಳೂರಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಇದೆ. ದಕ್ಷಿಣ ಕನ್ನಡದ ಬದಲಿಗೆ ಮಂಗಳೂರು ಎಂದು ಹೆಸರಿಸುವ ಬಗ್ಗೆ ಜನಾಭಿಪ್ರಾಯ ಪಡೆದು ತೀರ್ಮಾನಿಸಲಾಗುವುದು. ಕರಡು ಅಧಿಸೂಚನೆ ಹೊರಡಿಸಿ ಒಂದು ತಿಂಗಳ ಅವಧಿ ನೀಡಿ, ಜನರ ಭಾವನೆ, ಜನರ ಅಭಿಪ್ರಾಯ ಪಡೆದು ತೀರ್ಮಾನಿಸಲಾಗುವುದು ಎಂದರು.
*ಕರಾವಳಿ ಮಲೆನಾಡು ಕರ್ನಾಟಕ ಪ್ರವಾಸೋದ್ಯಮ ನೀತಿ*
ಕರಾವಳಿ ಮಲೆನಾಡು ಕರ್ನಾಟಕ ಪ್ರವಾಸೋದ್ಯಮ ನೀತಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಈವರೆಗಿನ ಎಲ್ಲಾ ನೀತಿಗಳಿಗಿಂತ ಭಿನ್ನವಾದ ನೀತಿ ಇದಾಗಲಿದೆ. ಹೂಡಿಕೆದಾರರಿಗೆ ಹೆಚ್ಚಿನ ಶಕ್ತಿ ಹಾಗೂ ಸಾಲ ಮರುಪಾವತಿಗೆ ಸಮಯಾವಕಾಶ ನೀಡಲಾಗುವುದು. ಮಲೆನಾಡು ಒಳಗೊಂಡಂತೆ ಕರಾವಳಿ ಪ್ರದೇಶದಲ್ಲಿ ಹೊಸ ಪ್ರವಾಸೋದ್ಯಮ ನೀತಿ ಮೂಲಕ ಪ್ರವಾಸೋದ್ಯಮ ಯೋಜನೆಗಳನ್ನು ಮೂಲಸೌಕರ್ಯ ಯೋಜನೆಗಳೆಂದು ಪರಿಗಣಿಸಲಾಗುವುದು. ಅಲ್ಲದೆ ಅನೇಕ ಪ್ರೋತ್ಸಾಹಕಗಳನ್ನು ನೀಡಲು ಯೋಜಿಸಲಾಗಿದೆ ಎಂದು ಅವರು ತಿಳಿಸಿದರು.
*ಮೀನುಗಾರಿಕಾ ವಿಶ್ವವಿದ್ಯಾಲಯ*
ಮೀನುಗಾರಿಕೆಗೆ ಸಂಬಂಧಿಸಿದಂತೆ Fisheries, Blue economy university ಯನ್ನು ಸ್ಥಾಪಿಸಲಾಗುವುದು. ಪ್ರಸ್ತುತ ಮೀನುಗಾರಿಕಾ ಕಾಲೇಜಿನ ವಿದ್ಯಾರ್ಥಿಗಳ ಪ್ರವೇಶವನ್ನು 60 ರಿಂದ 200 ಸೀಟುಗಳಿಗೆ ಹೆಚ್ಚಳ ಮಾಡಲಾಗುವುದು ಎಂದು ತಿಳಿಸಿದರು.
ಈ ಭಾಗದಲ್ಲಿ ಕಿದ್ವಾಯಿ, ಜಯದೇವ ಆಸ್ಪತ್ರೆಗೆ ಬೇಡಿಕೆ ಬಂದಿದೆ ಎಂದು ತಿಳಿಸಿದ ಅವರು ಪುತ್ತೂರಿನಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ 549 ಕೋಟಿ ರೂ. ಗಳಿಗೆ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.
*ಮುಂದಿನ ದಿನಗಳಲ್ಲಿ 10-12 ಕಡೆ ಸಚಿವ ಸಂಪುಟ ಸಭೆ*
ಬೆಂಗಳೂರಿನಿಂದಾಚೆಗೆ ಮಂಗಳೂರಿನಲ್ಲಿ ಮೊದಲ ಬಾರಿ ಸಚಿವ ಸಂಪುಟ ಸಭೆ ನಡೆಸಿರುವುದು ಸ್ವಾಗತಾರ್ಹ. ಇತರ ಜಿಲ್ಲೆಗಳಲ್ಲೂ ಸಚಿವ ಸಂಪುಟ ಸಭೆ ನಡೆಸುವಿರಾ? ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ಮುಂದಿನ 15 ತಿಂಗಳ ಅವಧಿಯಲ್ಲಿ 10 – 12 ಸ್ಥಳಗಳಲ್ಲಿ ಸಚಿವ ಸಂಪುಟ ಸಭೆ ನಡೆಸುವ ಉದ್ದೇಶವಿದೆ. ಎಲ್ಲಿ ಸಾಮರ್ಥ್ಯವಿದೆ, ಅಗತ್ಯವಿದೆ- ಅಲ್ಲಿ ಸಚಿವ ಸಂಪುಟ ಸಭೆ ನಡೆಸಲಾಗುವುದು ಎಂದು ಅವರು ತಿಳಿಸಿದರು.
ಸಮಗ್ರ ಕರ್ನಾಟಕ, ಸಮೃದ್ಧ ಕರ್ನಾಟಕವಾಗಿಸುವುದು ನಮ್ಮ ಗುರಿ ಎಂದು ಅವರು ವಿವರಿಸಿದರು.
*ದೇಶದಲ್ಲೇ ಗಮನ ಸೆಳೆದ ದಕ್ಷಿಣ ಕನ್ನಡ*
ಇಂದು ಕರಾವಳಿ ಜಿಲ್ಲೆಗಳ ಅಭಿವೃದ್ಧಿಗೆ ವಿವಿಧ ಆಯಾಮದ ಅಭಿವೃದ್ಧಿ ಯೋಜನೆಗಳನ್ನು ನೀಡುತ್ತಿದ್ದೀರಿ. ರಾಜ್ಯದ ಇತರ ಭಾಗಗಳಿಗೂ ಇದನ್ನು ವಿಸ್ತರಿಸುವಿರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು ಖಂಡಿತವಾಗಿ ವಿಸ್ತರಿಸಲಾಗುವುದು ಎಂದರು. ಜೊತೆಗೆ ದಕ್ಷಿಣ ಕನ್ನಡ ಧಾರ್ಮಿಕವಾಗಿ, ಶೈಕ್ಷಣಿಕವಾಗಿ ದೇಶದಲ್ಲೇ ಗಮನ ಸೆಳೆದಿದೆ. ದೇಶಕ್ಕೆ 6 ರಾಷ್ಟ್ರೀಕೃತ ಬ್ಯಾಂಕುಗಳನ್ನು ನೀಡಿ ಆರ್ಥಿಕ ಶಕ್ತಿಯನ್ನು ಹೊಂದಿರುವ ಸ್ಥಳವಿದು. ಬಂದರುಗಳಿವೆ. ಶಿಕ್ಷಣ, ಆರೋಗ್ಯ ಕ್ಷೇತ್ರಗಳ ಪ್ರಮುಖ ಕೇಂದ್ರವಾಗಿದೆ ಎಂದು ವಿವರಿಸಿದರು.
*ಕಸ್ತೂರಿ ರಂಗನ್ ವರದಿ: ಸಭೆಗಳಲ್ಲಿ ಭಾಗಿ*
ಇಂದು ಹೆಬ್ರಿಯಲ್ಲಿ ಕಸ್ತೂರಿರಂಗನ್ ವರದಿ ಬಗ್ಗೆ ಸಭೆಯಲ್ಲಿ ಪಾಲ್ಗೊಳ್ಳಲಿದ್ದು, ನಾಳೆ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಜನರ ಅಭಿಪ್ರಾಯ ಪಡೆಯಲಾಗುವುದು ಎಂದು ತಿಳಿಸಿದರು.
ಪ್ರಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಜನತೆ ತೋರಿಸಿದ ಅಭಿಮಾನ, ಸ್ವಾಗತಕ್ಕೆ ಕೃತಜ್ಞತೆ ಸಲ್ಲಿಸಿದ ಮುಖ್ಯಮಂತ್ರಿಗಳು, ದಕ್ಷಿಣ ಕನ್ನಡ ಜಿಲ್ಲೆ ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಬೆಳೆದಿರುವ ಜಿಲ್ಲೆ. ಇಡೀ ದೇಶ ದಕ್ಷಿಣ ಕನ್ನಡದ ಇತಿಹಾಸ ಪರಂಪರೆಯನ್ನು ತಿಳಿದಿದೆ. ಈ ಜಿಲ್ಲೆಯ ಅಭಿವೃದ್ಧಿಗೆ ನಾವು ಅಳಿಲು ಸೇವೆ ಮಾಡಲು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ಬಾರಿಗೆ ಸಚಿವ ಸಂಪುಟ ಸಭೆಯನ್ನು ನಡೆಸಲಾಗಿದೆ ಎಂದರು.
ಪಕ್ಷಭೇದ ಮರೆತು ಶಾಸಕರು, ಸಂಸದರು, ವಿಧಾನಪರಿಷತ್ತು ಸದಸ್ಯರೂ ಸೇರಿದಂತೆ ಸಲಹೆ ನೀಡಿ, ಜಿಲ್ಲೆಯ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ ಎಂದು ಅವರು ತಿಳಿಸಿದರು.
*ಭಾಷೆಯ ಕುರಿತ ಭಾವನೆ ದೊಡ್ಡದು*
ತುಳು ಭಾಷೆಯನ್ನು ಆಡಳಿತ ಭಾಷೆಯಾಗಿ ಘೋಷಿಸುವ ಕುರಿತು ಈ ಭಾಗದ ಜನರ ಭಾವನೆ, ಒತ್ತಡಗಳ ಕುರಿತು ವಿವರಿಸಿದ ಮುಖ್ಯಮಂತ್ರಿಗಳು, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಶಾಸಕರಾದ ನಂತರ ಅಧಿವೇಶನದಲ್ಲಿ ಕೇಳಿದ ಮೊದಲ ಪ್ರಶ್ನೆ ತುಳು ಭಾಷೆಯ ಕುರಿತಾದುದು. ನನಗೆ ಆಶ್ಚರ್ಯವಾಗಿತ್ತು. ಆದರೆ ಅವರ ಮೊದಲ ಭಾವನೆ ಇದ್ದದ್ದು ಭಾಷೆಯ ಮೇಲೆ. ಇಂದು ಅವರು 500 ಕೋಟಿ ಮೆಡಿಕಲ್ ಕಾಲೇಜು ಮಂಜೂರು ಮಾಡಿಸಿಕೊಂಡು ಲಾಟರಿ ಹೊಡೆದಿದ್ದಾರೆ, ಅದು ಬೇರೆ ವಿಷಯ. ಯು.ಟಿ. ಖಾದರ್ ಆಗ ಸ್ಪೀಕರ್ ಆಗಿದ್ದರು. ಇಬ್ಬರೂ ತುಳುವಿನಲ್ಲಿ ಮಾತನಾಡುತ್ತ, ಇತರರೂ ಸೇರಿ ಒತ್ತಡ ಹೇರಿದರು ಎಂದು ಸ್ಮರಿಸಿದರು. .











