ಗ್ರಾಮೀಣ ಪ್ರದೇಶದ ನಿವೇಶನ ಹಾಗೂ ಕಟ್ಟಡ ನಿರ್ಮಾಣ ತಾಂತ್ರಿಕ ಅನುಮೋದನೆ ಸಮಸ್ಯೆ ಪರಿಹಾರಕ್ಕೆ ಕ್ರಮ ವಹಿಸಿ: ನಗರಾಭಿವೃದ್ಧಿ ಸಚಿವರಿಗೆ ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು ಮನವಿ – ಕಹಳೆ ನ್ಯೂಸ್

ಮಂಗಳೂರು : ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಲ್ಲಿ ನಿವೇಶನ ವಿನ್ಯಾಸ ಅನುಮೋದನೆ (Layout Approval) ಹಾಗೂ ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ತಾಂತ್ರಿಕ ಅನುಮೋದನೆ ಪಡೆಯುವ ಸಂದರ್ಭದಲ್ಲಿ ಸಾರ್ವಜನಿಕರು ಎದುರಿಸುತ್ತಿರುವ ವಿವಿಧ ಪ್ರಾಯೋಗಿಕ ಮತ್ತು ತಾಂತ್ರಿಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಕರ್ನಾಟಕ ಸರ್ಕಾರದ ನಗರಾಭಿವೃದ್ಧಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ಅವರಿಗೆ ಕರ್ನಾಟಕ ವಿಧಾನ ಪರಿಷತ್ ಸದಸ್ಯರು ಮನವಿ ಸಲ್ಲಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಭೂ ಪರಿವರ್ತನೆ, ಹಿಂದಿನ ವಿನ್ಯಾಸ ಅನುಮೋದನೆ, ಸ್ಥಳೀಯ ಸಂಸ್ಥೆಗಳಿಂದ ಕಟ್ಟಡ ಪರವಾನಗಿ ಹಾಗೂ ಪ್ರಸ್ತುತ ನಗರ ಯೋಜನಾ ನಿಯಮಗಳ ನಡುವಿನ ವ್ಯತ್ಯಾಸದಿಂದಾಗಿ ಅನೇಕ ಸಾರ್ವಜನಿಕರು ತಮ್ಮ ಸ್ವಂತ ಜಮೀನು ಹಾಗೂ ನಿವೇಶನಗಳಲ್ಲಿ ಮನೆ ನಿರ್ಮಿಸಿಕೊಳ್ಳಲು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಮನವಿಯಲ್ಲಿ ಗಮನ ಸೆಳೆದರು.
ಭೂ ಪರಿವರ್ತನೆಗೊಂಡ ಜಮೀನಿನ ಒಂದು ಭಾಗಕ್ಕೆ ಹಿಂದೆ ವಿನ್ಯಾಸ ಅನುಮೋದನೆ ದೊರೆತಿದ್ದರೂ ಉಳಿದ ಭಾಗಕ್ಕೆ ಪ್ರಸ್ತುತ ನಿಯಮಗಳ ಕಾರಣದಿಂದ ಅನುಮೋದನೆ ನಿರಾಕರಿಸುವ ಪ್ರಕರಣಗಳಿದ್ದು, ಇಂತಹ ಹಳೆಯ ಪ್ರಕರಣಗಳಿಗೆ ಸ್ಪಷ್ಟ ಮಾರ್ಗಸೂಚಿ ರೂಪಿಸುವುದು, ಅದೇ ರೀತಿ, ಅಗತ್ಯ ರಸ್ತೆ ಮಾರ್ಜಿನ್ ಬಿಟ್ಟು ಭೂ ಪರಿವರ್ತನೆ ಮಾಡಿಕೊಂಡಿರುವ ನಿವೇಶನಗಳಿಗೆ ಸ್ಥಳದ ವಾಸ್ತವಿಕ ಪರಿಸ್ಥಿತಿ ಹಾಗೂ ಲಭ್ಯ ದಾಖಲೆಗಳನ್ನು ಪರಿಶೀಲಿಸಿ ಅರ್ಹ ಪ್ರಕರಣಗಳಲ್ಲಿ ತಾಂತ್ರಿಕ ಅನುಮೋದನೆ ನೀಡುವ ವ್ಯವಸ್ಥೆ ರೂಪಿಸಬೇಕು, ಈಗಾಗಲೇ ಭೂ ಪರಿವರ್ತನೆಗೊಂಡು ಕಟ್ಟಡ ನಿರ್ಮಾಣವಾಗಿದ್ದು, ಸ್ಥಳೀಯ ಸಂಸ್ಥೆಯಿಂದ ಕದ ನಂಬ್ರ ಅಥವಾ ಕಟ್ಟಡಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪಡೆಯದಿರುವ ಹಳೆಯ ಪ್ರಕರಣಗಳಲ್ಲಿ ಹಿಂದಿನ ಹಂತದಲ್ಲಿ ವಿನ್ಯಾಸ ಅನುಮೋದನೆ ಪಡೆಯದಿರುವ ಕಾರಣದಿಂದ ಪ್ರಸ್ತುತ ಅನುಮೋದನೆಗೆ ತೊಂದರೆಯಾಗುತ್ತಿದೆ. ಇಂತಹ ಪ್ರಕರಣಗಳನ್ನು ನಿಯಮಾನುಸಾರ ಸಕ್ರಮಗೊಳಿಸಲು ವಿಶೇಷ ವ್ಯವಸ್ಥೆ ಕಲ್ಪಿಸುವುದು, ತಾಂತ್ರಿಕ ಅನುಮೋದನೆ ದೊರೆತ ನಂತರವೂ Commencement Certificate ಹಾಗೂ Completion Certificate ಪಡೆಯಲು ವಿಳಂಬವಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿದ್ದು, ಅನುಮೋದನೆಯ ಮುಂದಿನ ಹಂತಗಳನ್ನೂ ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸುವ ವ್ಯವಸ್ಥೆ ಜಾರಿಗೆ ತರಬೇಕು ಈಗಾಗಲೇ ಕಾನೂನುಬದ್ಧವಾಗಿ ನಿರ್ಮಿಸಿರುವ ಕಟ್ಟಡಗಳ ವಿಸ್ತರಣೆ, ಹೆಚ್ಚುವರಿ ಮಹಡಿ ಅಥವಾ ಹೆಚ್ಚುವರಿ ಕಟ್ಟಡ ನಿರ್ಮಾಣಕ್ಕೆ ಅರ್ಜಿ ಸಲ್ಲಿಸುವಾಗ ಎದುರಾಗುತ್ತಿರುವ ತಾಂತ್ರಿಕ ಸಮಸ್ಯೆಗಳಿಗೂ ಸ್ಪಷ್ಟ ನಿಯಮಾವಳಿ ರೂಪಿಸುವುದು.
ಇದಲ್ಲದೆ, ಒಂದು ಉದ್ದೇಶಕ್ಕಾಗಿ ವಿನ್ಯಾಸ ಅನುಮೋದನೆ ಪಡೆದ ನಂತರ ಕಾನೂನುಬದ್ಧವಾಗಿ ಭೂ ಬಳಕೆಯ ಉದ್ದೇಶ ಬದಲಾವಣೆ ಮಾಡಿಕೊಂಡು ಮತ್ತೊಂದು ಉದ್ದೇಶಕ್ಕಾಗಿ ಪರಿಷ್ಕೃತ ವಿನ್ಯಾಸ ಅನುಮೋದನೆ ಕೋರುವ ಅರ್ಜಿಗಳಿಗೂ ಭೂ ಪರಿವರ್ತನೆ ಆದೇಶ ಹಾಗೂ ಸಂಬಂಧಿತ ದಾಖಲೆಗಳ ಆಧಾರದ ಮೇಲೆ ಅನುಮೋದನೆ ನೀಡಲು ಸ್ಪಷ್ಟ ಕಾರ್ಯವಿಧಾನ ರೂಪಿಸುವುದು ಸರ್ಕಾರ ಅಥವಾ ಸಂಬಂಧಪಟ್ಟ ಪ್ರಾಧಿಕಾರದಿಂದ 94C, 94CC ಸೇರಿದಂತೆ ಹಕ್ಕುಪತ್ರದ ಆಧಾರದ ಮೇಲೆ ನಿವೇಶನ ಪಡೆದಿರುವ ಬಡ ಹಾಗೂ ಮಧ್ಯಮ ವರ್ಗದ ಫಲಾನುಭವಿಗಳು ತಮ್ಮ ನಿವೇಶನಗಳಲ್ಲಿ ಮನೆ ನಿರ್ಮಿಸಿಕೊಳ್ಳಲು ಮುಂದಾದಾಗ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯಿಂದ ಎದುರಾಗುತ್ತಿರುವ ತಾಂತ್ರಿಕ ಅನುಮೋದನೆ ಸಮಸ್ಯೆಗಳನ್ನೂ ಸರಳಗೊಳಿಸುವ ಅಗತ್ಯವಿದೆ ಎಂದು ವಿಧಾನ ಪರಿಷತ್ ಸದಸ್ಯರು ಸಚಿವರ ಗಮನಕ್ಕೆ ತಂದಿದ್ದಾರೆ.
*ಆನ್‌ಲೈನ್* *ವ್ಯವಸ್ಥೆ* *ಮತ್ತು* *ಕಾಲಮಿತಿ* *ಜಾರಿಗೆ* *ಒತ್ತಾಯ*
ಸಾರ್ವಜನಿಕರು ಒಂದೇ ಅರ್ಜಿಗಾಗಿ ವಿವಿಧ ಕಚೇರಿಗಳಿಗೆ ಪದೇಪದೇ ಅಲೆದಾಡುವುದನ್ನು ತಪ್ಪಿಸಲು ಸಂಪೂರ್ಣ ಪಾರದರ್ಶಕ ಆನ್‌ಲೈನ್ ವ್ಯವಸ್ಥೆ ಜಾರಿಗೆ ತರಬೇಕು. ಅರ್ಜಿಯ ಪ್ರಸ್ತುತ ಸ್ಥಿತಿ, ತಾಂತ್ರಿಕ ಆಕ್ಷೇಪಣೆಗಳು, ಅಗತ್ಯ ದಾಖಲೆಗಳು ಹಾಗೂ ಅರ್ಜಿ ವಿಲೇವಾರಿ ಹಂತಗಳ ಮಾಹಿತಿಯನ್ನು ಆನ್‌ಲೈನ್‌ನಲ್ಲೇ ಅರ್ಜಿದಾರರಿಗೆ ಲಭ್ಯವಾಗುವಂತೆ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಅಲ್ಲದೆ, ಅರ್ಜಿಗಳನ್ನು ಸಕಾಲ ಕಾಯ್ದೆಯಡಿ ನಿಗದಿತ ಕಾಲಮಿತಿಯಲ್ಲಿ ವಿಲೇವಾರಿ ಮಾಡುವ ವ್ಯವಸ್ಥೆ ಜಾರಿಗೆ ತರಬೇಕು ಹಾಗೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸಂಬಂಧಪಟ್ಟ ನಗರ ಯೋಜನಾ ಪ್ರಾಧಿಕಾರ, ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಸ್ಯೆಗಳಿಗೆ ಏಕರೂಪದ ಮಾರ್ಗಸೂಚಿ ರೂಪಿಸಬೇಕು ಎಂದು ಸಚಿವರಲ್ಲಿ ಮನವಿ ಮಾಡಲಾಗಿದೆ.
ಗ್ರಾಮೀಣ ಪ್ರದೇಶದ ಸಾಮಾನ್ಯ ಜನರು ತಮ್ಮ ಸ್ವಂತ ನಿವೇಶನದಲ್ಲಿ ಕಾನೂನುಬದ್ಧವಾಗಿ ಮನೆ ನಿರ್ಮಿಸಿಕೊಳ್ಳುವ ಸಂದರ್ಭದಲ್ಲಿ ಎದುರಿಸುತ್ತಿರುವ ಈ ಸಮಸ್ಯೆಗಳನ್ನು ಮಾನವೀಯ ಹಾಗೂ ಪ್ರಾಯೋಗಿಕ ದೃಷ್ಟಿಕೋನದಿಂದ ಪರಿಗಣಿಸಿ, ಇಲಾಖೆಗಳ ನಡುವಿನ ಸಮನ್ವಯದ ಕೊರತೆಯನ್ನು ನಿವಾರಿಸುವ ಮೂಲಕ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ವಿಧಾನ ಪರಿಷತ್ ಸದಸ್ಯರು ಆಗ್ರಹಿಸಿದ್ದಾರೆ.
*ಮಂಗಳೂರು* *ನಗರದ* *ಸ್ವಚ್ಛತೆಯ* *ಬಗ್ಗೆ* *ಪ್ರಸ್ತಾಪ*
ಮಂಗಳೂರು ನಗರದ ಕಸವನ್ನು ವಿಲೇವಾರಿ ಮಾಡುತ್ತಿರುವ ಪಚ್ಚ ನಾಡಿ ಘಟಕದಲ್ಲಿ ಒಂಬತ್ತು ಲಕ್ಷ ಟನ್ ಗಿಂತಲೂ ಹೆಚ್ಚು ಕಸ ಉಳಿದುಕೊಂಡಿದ್ದು ಸದರಿ ಕಸವನ್ನು ವಿಲೇವಾರಿ ಮಾಡಲು ಸೂಕ್ತ ಕ್ರಮ ವಹಿಸಬೇಕು ಮತ್ತು ಘಟಕಕ್ಕೆ ಒಮ್ಮೆ ಭೇಟಿ ನೀಡುವಂತೆ ಸಚಿವರಿಗೆ ವಿನಂತಿಸಿದರು.
ಮಂಗಳೂರಿನ ಸ್ವಚ್ಛತೆಗೆ ರಾಮಕೃಷ್ಣ ಮಿಷನ್ ಕೈಗೊಂಡ ಮಾದರಿ ಕ್ರಮಗಳನ್ನು ತಿಳಿಸಿದರು ಮತ್ತು ಜಿಲ್ಲೆಯ ಸ್ವಚ್ಛತೆಯ ಬಗ್ಗೆ ಶ್ರಮಿಸುತ್ತಿರುವ ಜನ ಶಿಕ್ಷಣ ಟ್ರಸ್ಟ್ ನ ನಿರ್ದೇಶಕರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸ್ವಚ್ಛತಾ ರಾಯಭಾರಿಯಾದ ಶ್ರೀ ಶೀನ ಶೆಟ್ಟಿ ಮತ್ತು ನಿರ್ದೇಶಕರಾದ ಶ್ರೀ ಕೃಷ್ಣ ಮೂಲ್ಯ ರವರ ಪರಿಶ್ರಮವನ್ನು ಸಭೆಯಲ್ಲಿ ಪ್ರಸ್ತಾಪಿಸಿದರು
ಮಂಗಳೂರು ನಗರದ ಸ್ವಚ್ಛತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕಾಗಿ ಸಭೆಯಲ್ಲಿ ವಿನಂತಿಸಿದರು.











