
ಇಸ್ಲಾಮಾಬಾದ್ : ಭಾರತ ಮತ್ತು ಪಾಕಿಸ್ತಾನ ನಡುವಿನ ನೇರ ವ್ಯಾಪಾರ ಸಂಪರ್ಕ ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಆದಾಗ್ಯೂ ಪಾಕಿಸ್ತಾನದಲ್ಲಿ ಭಾರತೀಯ ಸರಕುಗಳಿಗೆ ಭಾರೀ ಬೇಡಿಕೆ ಇದ್ದು, ಸುಮಾರು 5,876 ಕೋಟಿ ರೂ. ಮೌಲ್ಯದ ಸರಕನ್ನು ಆಮದು ಮಾಡಿಕೊಂಡಿದೆ.
ಪ್ರಸಕ್ತ 2026-27ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಪಾಕಿಸ್ತಾನವು ಭಾರತದಿಂದ ಬರೋಬ್ಬರಿ 61.74 ಮಿಲಿಯನ್ ಡಾಲರ್ (ಸುಮಾರು 5,876 ಕೋಟಿ ರೂ.) ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಂಡಿದೆ. ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.69ರಷ್ಟು ಆಮದು ಏರಿಕೆಯಾಗಿದೆ. ಆದರೆ ಇದೇ ಅವಧಿಯಲ್ಲಿ ಪಾಕಿಸ್ತಾನದಿಂದ ಭಾರತಕ್ಕೆ ಯಾವುದೇ ರಫ್ತು ದಾಖಲಾಗಿಲ್ಲ ಎಂದು ವರದಿಯಾಗಿದೆ.
ಭಾರತ ಹಾಗೂ ಪಾಕ್ ನಡುವೆ ನೇರ ಗಡಿ ವ್ಯಾಪಾರ ಸಂಪೂರ್ಣ ಬಂದ್ ಆಗಿದೆ. ಆದಾಗ್ಯೂ ಪಾಕ್ ಗೆ ಭಾರತದ ಸರಕುಗಳು ಹೇಗೆ ತಲುಪುತ್ತಿದೆ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ದೊರೆತಿಲ್ಲ. ತಜ್ಞರ ಪ್ರಕಾರ ಮೂರನೇ ದೇಶಗಳ ಮೂಲಕ ಭಾರತದ ಸರಕುಗಳು ಪಾಕಿಸ್ತಾನಕ್ಕೆ ತಲುಪುತ್ತಿವೆ. ಯುಎಇ (ದುಬೈ), ಸಿಂಗಾಪುರ ಹಾಗೂ ಕೊಲಂಬೊ ಮೂಲಕ ಭಾರತೀಯ ಸರಕುಗಳನ್ನು ಪಾಕಿಸ್ತಾನಕ್ಕೆ ರವಾನಿಸಲಾಗುತ್ತಿದೆ ಎಂದು ಹೇಳಲಾಗಿದೆ.
“ಭಾರತದಿಂದ ಹೊರಡುವ ಸರಕುಗಳನ್ನು ದುಬೈ ಅಥವಾ ಸಿಂಗಾಪುರದಲ್ಲಿರುವ ವೇರ್ಹೌಸ್ಗಳಲ್ಲಿ ಇರಿಸಲಾಗುತ್ತದೆ. ಅಲ್ಲಿ ಅವುಗಳ ಮೂಲ ದಾಖಲೆಗಳು ಹಾಗೂ ಲೇಬಲ್ಗಳನ್ನು ಬದಲಾಯಿಸಿ, ‘ಮೇಡ್ ಇನ್ ಯುಎಇ’ ಎಂಬ ಹೊಸ ಲೇಬಲ್ ಅಡಿಯಲ್ಲಿ ಪಾಕಿಸ್ತಾನಕ್ಕೆ ಮರು-ರಫ್ತು ಮಾಡಲಾಗುತ್ತದೆ. ಮೂರನೇ ದೇಶಗಳ ಮಾರ್ಗವಾಗಿ ಭಾರತದಿಂದ ಪಾಕಿಸ್ತಾನಕ್ಕೆ ವಾರ್ಷಿಕವಾಗಿ ಸುಮಾರು 10 ಬಿಲಿಯನ್ ಡಾಲರ್ ಮೌಲ್ಯದ ಅನಧಿಕೃತ ವ್ಯಾಪಾರ ನಡೆಯುತ್ತಿದೆ” ಎಂದು ಗ್ಲೋಬಲ್ ಟ್ರೇಡ್ ರಿಸರ್ಚ್ ಇನಿಶಿಯೇಟಿವ್ ಸಂಸ್ಥಾಪಕ ಅಜಯ್ ಶ್ರೀವಾಸ್ತವ ಅವರು ಅಭಿಪ್ರಾಯಪಟ್ಟಿದ್ದಾರೆ.
ಪಾಕಿಸ್ತಾನವು ಭಾರತದ ಔಷಧಿ ಕಚ್ಚಾವಸ್ತುಗಳನ್ನು ಬಹುಪಾಲು ಆಮದು ಮಾಡಿಕೊಳ್ಳುತ್ತಿದೆ. ಜೊತೆಗೆ ಪ್ಲಾಸ್ಟಿಕ್, ಪೆಟ್ರೋಲಿಯಂ ಉತ್ಪನ್ನಗಳು ಹಾಗೂ ಸಾವಯವ ರಾಸಾಯನಿಕಗಳು, ರಬ್ಬರ್, ಬಣ್ಣಗಳು, ಕಾಫಿ, ಚಹಾ, ತರಕಾರಿಗಳು, ಸಂಬಾರ ಪದಾರ್ಥಗಳು, ಡೈರಿ ಉತ್ಪನ್ನಗಳು ಮತ್ತು ಧಾನ್ಯಗಳನ್ನು ಕೂಡ ಆಮದು ಮಾಡಿಕೊಳ್ಳುತ್ತಿದೆ.










