ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಮೊಳಗಿದ ಗುಂಡಿನ ಸದ್ದು : ರೌಡಿಶೀಟರ್ ಹತ್ಯೆ ಆರೋಪಿಗೆ ಗುಂಡೇಟು – ಕಹಳೆ ನ್ಯೂಸ್

ಶಿವಮೊಗ್ಗ: ನಗರದಲ್ಲಿ (Shivamogga) ಬೆಳ್ಳಂಬೆಳಗ್ಗೆ ಪೊಲೀಸರ ಗುಂಡಿನ ಸದ್ದು ಮೊಳಗಿದೆ. ಭಾನುವಾರ (ಸೆ.6) ಸಂಜೆ ನಡೆದಿದ್ದ ರೌಡಿಶೀಟರ್ ಕಿರಣ್ ಅಲಿಯಾಸ್ ಕುಳ್ಳಿ ಕಿರಣ್ ಕೊಲೆ ಆರೋಪಿ ಕಾಲಿಗೆ ಪೊಲೀಸರು ಗುಂಡೇಟು ನೀಡಿದ್ದಾರೆ.
ಕೊಲೆ ಆರೋಪಿ ಉಮೇಶ್ ನಾಯ್ಕ್ (27) ಕಾಲಿಗೆ ಪೊಲೀಸರು ಗುಂಡೇಟು ನೀಡಿದ್ದಾರೆ. ಆರೋಪಿಯನ್ನು ಬಂಧಿಸಲು ಪೊಲೀಸರು ಲಿಂಗಾಪುರಕ್ಕೆ ತೆರಳಿದ್ದರು. ಈ ವೇಳೆ ಪೊಲೀಸ್ ಸಿಬ್ಬಂದಿ ತಮ್ಮಣ್ಣ ಜಂಬಗಿ ಮೇಲೆ ಆರೋಪಿ ಹಲ್ಲೆ ಮಾಡಿದ್ದಾನೆ. ಹಲ್ಲೆ ಮಾಡದಂತೆ ತುಂಗಾನಗರ ಇನ್ಸ್‌ಪೆಕ್ಟರ್ ಗುರುರಾಜ್ ಕರ್ಕಿ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದ್ದಾರೆ. ಆದರೆ ಆರೋಪಿ ಪೊಲೀಸರ ಮೇಲೆ ಮತ್ತೆ ಹಲ್ಲೆ ನಡೆಸಿದ್ದು, ಆತನ ಕಾಲಿಗೆ ಗುಂಡೇಟು ನೀಡಿದ್ದಾರೆ.
ಗುಂಡೇಟಿನಿಂದ ಗಾಯಗೊಂಡ ಉಮೇಶ್ ನಾಯ್ಕ್‌ನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸ್ ಸಿಬ್ಬಂದಿ ತಮ್ಮಣ್ಣಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











