
ಕಠ್ಮಂಡು: ಮೂವತ್ತು ವರ್ಷಗಳಲ್ಲೇ ಅತ್ಯಂತ ಭೀಕರವಾದ ಪ್ರವಾಹಕ್ಕೆ ನೇಪಾಳ (Nepal) ತತ್ತರಿಸಿಹೋಗಿದೆ. ಈ ನೈಸರ್ಗಿಕ ವಿಕೋಪದಲ್ಲಿ ಸಾವಿನ ಸಂಖ್ಯೆ 392ಕ್ಕೆ ತಲುಪಿದ್ದು, 1500ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ.
ಬುಧವಾರ (ಆ.6) ಸಂಭವಿಸಿದ ಈ ಜಲಪ್ರಳಯದಿಂದಾಗಿ ದೇಶಾದ್ಯಂತ ವ್ಯಾಪಕ ನಷ್ಟ ಉಂಟಾಗಿದೆ. ಚಿತ್ರಾನ್, ನವಲ್‌ಪರಾಸಿ, ಧಾಡಿಂಗ್, ರಸುವಾ ಮತ್ತು ನುನಾಕೋಟ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಾವುನೋವುಗಳು ಸಂಭವಿಸಿವೆ. ಪ್ರವಾಸಕ್ಕೆ ತೆರಳಿದ್ದ 288 ಭಾರತೀಯರು ಸೇರಿದಂತೆ ನಾಪತ್ತೆಯಾಗಿರುವ ನೂರಾರು ಜನರಿಗಾಗಿ ರಕ್ಷಣಾ ಪಡೆಗಳು ತೀವ್ರ ಹುಡುಕಾಟ ನಡೆಸುತ್ತಿವೆ. ಈವರೆಗೆ ಸೈನಿಕರು ಹಾಗೂ ರಕ್ಷಣಾ ಸಿಬ್ಬಂದಿ 800ಕ್ಕೂ ಹೆಚ್ಚು ಜನರನ್ನು ಸುರಕ್ಷಿತವಾಗಿ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಭಾರೀ ಪ್ರವಾಹದ ರಭಸಕ್ಕೆ ಒಟ್ಟು 80ಕ್ಕೂ ಅಧಿಕ ಸೇತುವೆಗಳು (35 ಸಾಮಾನ್ಯ ಹಾಗೂ 45 ತೂಗುಸೇತುವೆಗಳು) ಕೊಚ್ಚಿಹೋಗಿವೆ. ಇದರೊಂದಿಗೆ ರಾಜಧಾನಿ ಕಠ್ಮಂಡುವನ್ನು ಸಂಪರ್ಕಿಸುವ ಮುಖ್ಯ ಹೆದ್ದಾರಿ ಸೇರಿದಂತೆ ನೂರಾರು ಕಿಲೋಮೀಟರ್ ರಸ್ತೆಗಳು ಜಲಸಮಾಧಿಯಾಗಿವೆ. ಪರಿಣಾಮವಾಗಿ ದೇಶದ ಪ್ರಮುಖ ಸಂಚಾರ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದ್ದು, ನೇಪಾಳದ ಆಧುನಿಕ ಇತಿಹಾಸದಲ್ಲೇ ಇದು ಅತ್ಯಂತ ದೊಡ್ಡ ದುರಂತವಾಗಿ ದಾಖಲಾಗಿದೆ.











