ಮಂಡ್ಯ ಕಾರಾಗೃಹದಲ್ಲಿ ರಾಜ್ಯಾತಿಥ್ಯ ಆರೋಪ : ವೈರಲ್ ಪತ್ರದಲ್ಲಿ ಬೀಡಿ-ಸಿಗರೇಟ್ ಬೇಡಿಕೆಯ ಸೀಕ್ರೆಟ್ ಬಯಲು – ಕಹಳೆ ನ್ಯೂಸ್

ಮಂಡ್ಯ: ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳಿಗೆ ರಾಜ್ಯಾತಿಥ್ಯ ನೀಡಲು ಅಧಿಕಾರಿಗಳು ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಪತ್ರ ವೈರಲ್ ಆದ ಬೆನ್ನಲ್ಲೇ ಪ್ರಕರಣಕ್ಕೀಗ ಸ್ಫೋಟಕ ತಿರುವು ಸಿಕ್ಕಿದೆ. ಜೈಲಧಿಕಾರಿಗಳ ಆಂತರಿಕ ತನಿಖೆಯಲ್ಲಿ ಇದು ಕೈದಿಗಳೇ ಹೆಣೆದ ಷಡ್ಯಂತ್ರ ಎಂಬ ಸತ್ಯಾಂಶ ಬೆಳಕಿಗೆ ಬಂದಿದ್ದು, ಜೈಲು ಅಧೀಕ್ಷಕಿ ಶಾಂತಮ್ಮ ಅವರು ಈ ಕುರಿತು ಸಂಪೂರ್ಣ ಮಾಹಿತಿ ನೀಡಿದ್ದಾರೆ.
ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್ ಕುಮಾರ್ ಅವರು ಮಂಡ್ಯ ಜೈಲಿಗೆ ಮೊನ್ನೆ ಭೇಟಿ ನೀಡಿದ್ದರು. ಈ ವೇಳೆ ಕೆಲ ಕೈದಿಗಳು ಜೈಲಿನಲ್ಲಿ ಬೀಡಿ, ಸಿಗರೇಟ್ ಪೂರೈಕೆ ಹಾಗೂ ಕ್ಯಾಂಟೀನ್‌ನಲ್ಲಿ ಚಪಾತಿ ಊಟ ನೀಡುವಂತೆ ಅವರ ಮುಂದೆ ನೇರವಾಗಿ ಬೇಡಿಕೆ ಇಟ್ಟಿದ್ದರು.
ಜೈಲಿನ ನಿಯಮಾವಳಿ ಪ್ರಕಾರ, ಬೀಡಿ ಹಾಗೂ ಸಿಗರೇಟ್ ಪೂರೈಕೆಗೆ ಡಿಜಿಪಿ ಅಲೋಕ್ ಕುಮಾರ್ ಕಟ್ಟುನಿಟ್ಟಾಗಿ ನಿರಾಕರಿಸಿದ್ದರು. ಇದರಿಂದ ಅಸಮಾಧಾನಗೊಂಡ ಕೈದಿಗಳು ಅಧಿಕಾರಿಗಳ ವಿರುದ್ಧ ಸಂಚು ರೂಪಿಸಿದ್ದಾರೆ.
ಡಿಜಿಪಿ ಭೇಟಿಗೆ ಮುನ್ನವೇ ಇಬ್ಬರು ಕೈದಿಗಳು ಸೇರಿಕೊಂಡು ತಮ್ಮ ಬೇಡಿಕೆಗಳ ಕುರಿತು ಪತ್ರ ಸಿದ್ಧಪಡಿಸಿದ್ದರು. ಉಳಿದ ಕೈದಿಗಳಿಂದ ಸಹಿ ಹಾಗೂ ಹೆಬ್ಬೆಟ್ಟಿನ ಗುರುತುಗಳನ್ನು ಪಡೆದುಕೊಂಡಿದ್ದರು. ಆದರೆ ಡಿಜಿಪಿ ಬೇಡಿಕೆಯನ್ನು ತಿರಸ್ಕರಿಸುತ್ತಿದ್ದಂತೆ, ಅದೇ ಸಹಿ ಇದ್ದ ಪತ್ರದಲ್ಲಿ ಅಧಿಕಾರಿಗಳ ವಿರುದ್ಧ ಹಣ ವಸೂಲಿ ಹಾಗೂ ರಾಜ್ಯಾತಿಥ್ಯದ ಸುಳ್ಳು ಆರೋಪಗಳನ್ನು ಸೇರಿಸಿ, ಪತ್ರವನ್ನು ವೈರಲ್ ಮಾಡಲಾಗಿದೆ ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ.
ಸದ್ಯ ಜೈಲಿನಿಂದ ಈ ಪತ್ರ ಹೊರಗಡೆ ಹೋಗಿದ್ದು ಹೇಗೆ? ಮತ್ತು ಇದರ ಹಿಂದೆ ಯಾರ ಕೈವಾಡವಿದೆ? ಎಂಬ ಬಗ್ಗೆ ಕಾರಾಗೃಹ ಇಲಾಖೆ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ.











