
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಓಮ್ನಿ ಕಾರ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಅಂತರ್ ರಾಜ್ಯ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ಕೇರಳ ಕಾಸರಗೋಡು ನಿವಾಸಿಗಳಾದ ಅಬ್ದುಲ್ ಸಾಯಿಲ್ ಜೆ (25), ಮೊಹಮ್ಮದ್ ಆಸೀಕ್ (25) ಮೊಹಮ್ಮದ್ ಸಿರಾಜ್ (28) ಹಾಗೂ ತಮಿಳುನಾಡು ಕರೂರು ನಿವಾಸಿ ಶಕ್ತಿವೇಲು ಜಿ (24) ಬಂಧಿತ ಆರೋಪಿಗಳು.
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಾಡ್ನೂರು ಕಾವು ಎಂಬಲ್ಲಿ ಜೂನ್ 19 ರಿಂದ ಜೂನ್ 20 ರ ಅವಧಿಯಲ್ಲಿ ನಡೆದ ಓಮ್ನಿ ಕಾರ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಅ.ಕ್ರ: 94/2026, 303(2)ಬಿಎನ್‌ಎಸ್ ರಂತೆ ಪ್ರಕರಣ ದಾಖಲಾಗಿತ್ತು. ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಪ್ರಮೋದ್ ಕುಮಾರ್ ರವರ ಹಾಗೂ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಪ್ರಭಾರ ಪೊಲೀಸ್ ನಿರೀಕ್ಷಕರಾದ ತಿಮ್ಮಪ್ಪ ನಾಯ್ಕ್ ರವರ ಮಾರ್ಗದರ್ಶನದಲ್ಲಿ, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಗುಣಪಾಲ ಜೆ ಮತ್ತು ಪಿಎಸ್‌ಐ ಸುಷ್ಮಾ.ಜಿ ಭಂಡಾರಿ ಅವರ ನೇತೃತ್ವದಲ್ಲಿ ತನಿಖೆ ನಡೆಸಲಾಯಿತು.
ಈ ತನಿಖಾ ತಂಡವು ಪ್ರಕರಣ ಆರೋಪಿಗಳ ಪತ್ತೆಗಾಗಿ ಕೇರಳ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ತನಿಖೆ ನಡೆಸಿ, ಅಂತರ್ ರಾಜ್ಯಗಳಲ್ಲಿ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ದಸ್ತಗಿರಿ ಮಾಡಿದೆ. ಬಂಧಿತರಿಂದ ಕಳ್ಳತನ ಮಾಡಿದ ಓಮ್ನಿ ಕಾರ್ (2.5 ಲಕ್ಷ ರೂ ಅಂದಾಜು ಮೌಲ್ಯ) ಹಾಗೂ ಕಳ್ಳತನ ಮಾಡಲು ಉಪಯೋಗಿಸಿದ ಕೆಟಿಎಂ ಬೈಕ್ ನ್ನು (1 ಲಕ್ಷ ಅಂದಾಜು ಮೌಲ್ಯ) ಸ್ವತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ವಿಚಾರಣೆ ವೇಳೆ ಈ ಆರೋಪಿಗಳು ಓಮ್ನಿ ಕಾರ್ ನ್ನು ಕದ್ದು, ಕೇರಳ ರಾಜ್ಯಕ್ಕೆ ತೆಗೆದುಕೊಂಡು ಹೋಗಿರುವುದು, ಕೇರಳದಿಂದ ತಮಿಳುನಾಡು ರಾಜ್ಯಕ್ಕೆ ಮಾರಾಟ ಮಾಡಿರುವುದು ಹಾಗೂ ತಮಿಳುನಾಡಿನಲ್ಲಿ ಈ ಕದ್ದ ವಾಹನವನ್ನು ಆಂಬುಲೆನ್ಸ್ ಆಗಿ ಪರಿವರ್ತಿಸಿರುವುದು ತಿಳಿದುಬಂದಿದೆ.
ಈ ಆರೋಪಿಗಳ ವಿರುದ್ಧ ಕೇರಳದ ಬದಿಯಡ್ಕ ಪೊಲೀಸ್ ಠಾಣೆ, ವಿದ್ಯಾನಗರ ಪೊಲೀಸ್ ಠಾಣೆ ಗಳಲ್ಲಿ ಈಗಾಗಲೇ ಕಳ್ಳತನ ಪ್ರಕರಣಗಳು ದಾಖಲಾಗಿರುತ್ತದೆ. ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ, ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿರುತ್ತಾರೆ.











