ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲಯದಲ್ಲಿ ವಿಜ್ಞಾನ ಸಂಘ ಮತ್ತು ಐ.ಕ್ಯೂ.ಎ.ಸಿ ಘಟಕದ ಜಂಟಿ ಆಶ್ರಯದಲ್ಲಿ ನಡೆದ 2026-27ನೇ ಸಾಲಿನ ವಿಜ್ಞಾನ ಸಂಘದ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ – ಕಹಳೆ ನ್ಯೂಸ್

ಪುತ್ತೂರು : ಗಣಿತವು ಕಠಿಣ ವಿಷಯವೆಂದು ಹಲವರು ಭಾವಿಸುತ್ತಾರೆ. ವಿದ್ಯಾರ್ಥಿಗಳಲ್ಲಿ ತರ್ಕಬದ್ಧ ಚಿಂತನೆ ಇಲ್ಲದಿರುವುದರಿಂದ ಇಂತಹ ಭಯ ಹೊಂದಿರುತ್ತಾರೆ. ವಿದ್ಯಾರ್ಥಿಗಳು ಸದಾ ಏಕೆ, ಹೇಗೆ, ಯಾವಾಗ ಎಂಬ ಪ್ರಶ್ನೆಗಳನ್ನು ಕೇಳಬೇಕು. ಅಂತಹ ತಾರ್ಕಿಕ ಶಕ್ತಿಯನ್ನು
ಬೆಳೆಸಿಕೊಂಡರೆ ಖಂಡಿತವಾಗಿಯೂ ಗಣಿತವು ಸರಳವಾಗುತ್ತದೆ ಎಂದು ಉಜಿರೆ ಎಂದು ಉಜಿರೆ ಎಸ್.ಡಿ.ಎಂ ಕಾಲೇಜಿನ ನಿವೃತ್ತ ಉಪನ್ಯಾಸಕ ಡಾ.ಟಿ.ಪ್ರಕಾಶ್ ಪ್ರಭು ಹೇಳಿದರು.
ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲಯ, ಪುತ್ತೂರು ಇಲ್ಲಿನ ವಿಜ್ಞಾನ ಸಂಘ ಮತ್ತು ಐ.ಕ್ಯೂ.ಎ.ಸಿ ಘಟಕದ ಜಂಟಿ ಆಶ್ರಯದಲ್ಲಿ ನಡೆದ 2026-27ನೇ ಸಾಲಿನ ವಿಜ್ಞಾನ ಸಂಘದ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳೇ ಕಾರ್ಯಕ್ರಮಗಳು ಆಯೋಜಿಸಿದಾಗ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಾಗುತ್ತದೆ. ಶೈಕ್ಷಣಿಕ ಪಠ್ಯಗಳಲ್ಲಿ ಏನು ಮಾಹಿತಿ ಸಿಗುತ್ತದೆಯೋ ಅದನ್ನು ಮೀರಿ ಚಟುವಟಿಕೆಗಳಲ್ಲಿ ತಿಳಿದುಕೊಳ್ಳಬೇಕು.
ಅಸೋಸಿಯೇಷನ್‍ನ ಚಟುವಟಿಕೆಗಳ ಮೂಲಕ ಪಠ್ಯೇತರ ವಿಷಯಗಳನ್ನು ತಿಳಿದುಕೊಳ್ಳುವ ಅವಕಾಶವಿದೆ. ವಿದ್ಯಾರ್ಥಿಗಳು ತಮ್ಮ ಯೋಚನೆಗಳನ್ನು, ಸೃಜನಾತ್ಮಕ ಚಿಂತನೆಗಳನ್ನು ಇಲ್ಲಿ ಅನ್ವಯಿಸಲು ಅವಕಾಶವಿದೆ. ವಿಜ್ಞಾನ ವಿದ್ಯಾರ್ಥಿಗಳು ಪ್ರಶ್ನಿಸುವ ಮನೋಭಾವವನ್ನು ಹೊಂದಿರಬೇಕು. ಆಗ ಮಾತ್ರ ಹೊಸದೊಂದರ ಆವಿಷ್ಕಾರವಾಗುತ್ತದೆ. ಆದರೆ ಪ್ರಶ್ನೆಗಳನ್ನು ಕೇಳುವಾಗ ಮುಗ್ಧತೆ ಇರಬೇಕು. ಭಾರತೀಯ ಚಿಂತನೆಗಳು ಮತ್ತು ವಿಚಾರಧಾರೆಗಳು ಸುಳ್ಳಾಗಲು ಸಾಧ್ಯವಿಲ್ಲ. ವಿಜ್ಞಾನ ಮತ್ತು ಸುಜ್ಞಾನ ಎರಡು ಮಿಶ್ರಿತವಾದರೆ
ಮಾತ್ರ ಬದುಕಿಗೆ ಸಾಕಾರವಾಗುತ್ತದೆ ಎಂದು ಕಾಲೇಜು ಆಡಳಿತ ಮಂಡಳಿ ಸಂಚಾಲಕ ಮುರಳಿ ಕೃಷ್ಣ ಕೆ.ಎನ್ ಅಧ್ಯಕ್ಷಿಯ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ವಿಜ್ಞಾನ ಸಂಘದ ಲೋಗೋವನ್ನು ಉದ್ಘಾಟಿಸಲಾಯಿತು. ವಿಜ್ಞಾನ ಸಂಘದ ಕಾರ್ಯದರ್ಶಿ ಅನಘ್ರ್ಯ.ಜಿ ವಾರ್ಷಿಕ ಕಾರ್ಯಚಟುವಟಿಕೆಗಳ ಪಟ್ಟಿಯನ್ನು ವಾಚಿಸಿದರು. ವಿದ್ಯಾರ್ಥಿಗಳಿಗೆ ‘ಮಾಥ್ ಫನ್ ಅಂಡ್ ಮ್ಯೂಸಿಕ್’ ವಿಷಯದ ಕುರಿತು ವಿಶೇಷ ಕಾರ್ಯಾಗಾರ ನಡೆಸಲಾಯಿತು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಶ್ರೀಕೃಷ್ಣ ಗಣರಾಜ್ ಭಟ್, ರಾಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಶಿವಪ್ರಸಾದ್ ಕೆ.ಎಸ್, ವಿಜ್ಞಾನ ಸಂಘದ ಸಂಯೋಜಕಿ ಸೌಮ್ಯ.ಬಿ, ವಿಜ್ಞಾನ ಸಂಘದ ಅಧ್ಯಕ್ಷ ಶ್ರೀಜನ್, ಕಾರ್ಯದರ್ಶಿ ಅನಘ್ರ್ಯ.ಜಿ, ಜೊತೆ ಕಾರ್ಯದರ್ಶಿ ಜೀವಿತ ಎಂ.ಆರ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿಯರಾದ ಹಂಶಿತಾ.ಕೆ ಸ್ವಾಗತಿಸಿ, ಚೇತನ ಸಿ.ಆರ್ ವಂದಿಸಿ, ಅಂಕಿತ.ಎ ನಿರೂಪಿಸಿದರು.











