ಡಿಕೆಶಿ ನಿವಾಸಕ್ಕೆ ಗೌತಮ್ ಅದಾನಿ ಭೇಟಿ : ಸುರಂಗ ರಸ್ತೆ ಯೋಜನೆ ಕುರಿತು ಮಹತ್ವದ ಚರ್ಚೆ- ಕಹಳೆ ನ್ಯೂಸ್

ಬೆಂಗಳೂರು: ಸದಾಶಿವನಗರದಲ್ಲಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿವಾಸಕ್ಕೆ ಅದಾನಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಗೌತಮ್ ಅದಾನಿ ಭೇಟಿ ನೀಡಿ ಮಾತುಕತೆ ನಡೆಸಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ರಾಜ್ಯದಲ್ಲಿ ಉದ್ದಿಮೆ ಅವಕಾಶಗಳ ಜತೆಗೆ, ಬಹುನಿರೀಕ್ಷಿತ ಬೆಂಗಳೂರು ಸುರಂಗ ರಸ್ತೆ ಯೋಜನೆ ಗುತ್ತಿಗೆ ಹಂಚಿಕೆಗೆ ಸಂಬಂಧಿಸಿದಂತೆ ಇಬ್ಬರ ನಡುವೆ ಮಹತ್ವದ ಚರ್ಚೆ ನಡೆದಿದೆ ಎನ್ನಲಾಗಿದೆ.
ಬೆಂಗಳೂರಿನ ಸಂಚಾರ(Bengaluru Traffic) ದಟ್ಟಣೆ ನಿಯಂತ್ರಣಕ್ಕಾಗಿ ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ನಡುವೆ ಸುಮಾರು 17 ಕಿ.ಮೀ. ಉದ್ದದ ಸುರಂಗ ರಸ್ತೆ(Tunnel Road) ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಈ ಯೋಜನೆಗಾಗಿ ಸರ್ಕಾರ ಅಂದಾಜು 17,698 ಕೋಟಿ ವೆಚ್ಚ ನಿಗದಿಪಡಿಸಿತ್ತು. ಆದರೆ ಟೆಂಡರ್ ಪ್ರಕ್ರಿಯೆಯಲ್ಲಿ ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ ಸಂಸ್ಥೆಯು 22,267 ಕೋಟಿ ರೂ. ಮೊತ್ತವನ್ನು ನಮೂದಿಸಿ ಅತಿ ಕಡಿಮೆ ಬಿಡ್ (Lowest Bidder) ಸಲ್ಲಿಸಿದ ಸಂಸ್ಥೆಯಾಗಿ ಹೊರಹೊಮ್ಮಿದೆ. ಸರ್ಕಾರದ ಅಂದಾಜು ಮೊತ್ತಕ್ಕಿಂತ ಇದು ಹೆಚ್ಚಾಗಿದ್ದರೂ, ಬಿಡ್ಡಿಂಗ್‌ನಲ್ಲಿ ಭಾಗವಹಿಸಿದ್ದ ಇತರೆ ಸಂಸ್ಥೆಗಳಿಗೆ ಹೋಲಿಸಿದರೆ ಅದಾನಿ ಸಂಸ್ಥೆಯ ಮೊತ್ತವೇ ಕಡಿಮೆಯಾಗಿದೆ.











