
ನವದೆಹಲಿ: ರಕ್ಷಣಾ ಕ್ಷೇತ್ರದಲ್ಲಿ ಸಂಪೂರ್ಣ ಸ್ವಾವಲಂಬನೆ ಸಾಧಿಸುವ ಭಾರತದ ಪ್ರಯತ್ನಕ್ಕೆ ಐತಿಹಾಸಿಕ ಯಶಸ್ಸು ಸಿಕ್ಕಿದೆ. ಶೇ. 100 ರಷ್ಟು ಭಾರತೀಯ ಕಚ್ಚಾವಸ್ತು ಹಾಗೂ ಸ್ವದೇಶಿ ಬಿಡಿಭಾಗಗಳಿಂದಲೇ ನಿರ್ಮಿಸಲಾದ ಅತ್ಯಾಧುನಿಕ ಎಕೆ-203(AK-203) ಅಸಾಲ್ಟ್ ರೈಫಲ್‌ನ ಮೊದಲ ಆವೃತ್ತಿಯ ಫೈರಿಂಗ್ ಪರೀಕ್ಷೆ ಯಶಸ್ವಿಯಾಗಿ ಪೂರ್ಣಗೊಂಡಿದೆ.
ಉತ್ತರ ಪ್ರದೇಶದ ಅಮೇಥಿಯಲ್ಲಿರುವ ಕೋರ್ವಾ ಆರ್ಡನೆನ್ಸ್ ಕಾರ್ಖಾನೆಯಲ್ಲಿ ಇಂಡೋ-ರಷ್ಯನ್ ರೈಫಲ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಮೇಕ್ ಇನ್ ಇಂಡಿಯಾ ಯೋಜನೆಯಡಿ ಈ ರೈಫಲ್ ಅನ್ನು ಸಂಪೂರ್ಣವಾಗಿ ದೇಶಿಯವಾಗಿ ಸಿದ್ಧಪಡಿಸಿದೆ. ಈ ಸ್ವದೇಶಿ ಮಾದರಿಯ ರೈಫಲ್‌ಗೆ ‘ಶೇರ್’ ಎಂದು ಹೆಸರಿಸಲಾಗಿದೆ.
ಏನಿದರ ವಿಶೇಷತೆ?
ರೈಫಲ್‌ಗೆ ಬಳಸಲಾದ ಪ್ರತಿಯೊಂದು ಬಿಡಿಭಾಗ ಹಾಗೂ ಕಚ್ಚಾ ಸಾಮಗ್ರಿಯನ್ನು ಭಾರತೀಯ ಉದ್ಯಮಗಳಿಂದಲೇ ಸಂಗ್ರಹಿಸಲಾಗಿದೆ. ಇದು ಗ್ಯಾಸ್ ಆಧಾರಿತ 7.62×39 ಮಿಮೀ ಸಾಮರ್ಥ್ಯದ ಅಸಾಲ್ಟ್ ರೈಫಲ್ ಆಗಿದ್ದು, ನಿಮಿಷಕ್ಕೆ 700 ಸುತ್ತು ಗುಂಡು ಹಾರಿಸುವ ಹಾಗೂ 800 ಮೀಟರ್ ವರೆಗಿನ ಗುರಿಯನ್ನು ನಿಖರವಾಗಿ ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ. ಶೀಘ್ರದಲ್ಲೇ ಪ್ರತಿ 100 ಸೆಕೆಂಡಿಗೆ ಒಂದು ಎಕೆ-203 ರೈಫಲ್ ತಯಾರಿಸುವ ಬೃಹತ್ ಉತ್ಪಾದನಾ ಗುರಿಯನ್ನು ಸಂಸ್ಥೆ ಹಾಕಿಕೊಂಡಿದೆ.











