Saturday, August 15, 2026
ಸುದ್ದಿ

ಪುತ್ತೂರಿನಲ್ಲಿ ಬೃಹತ್ ಪಂಜಿನ ಮೆರವಣಿಗೆ: ನಿವೃತ್ತ ಯೋಧರಿಗೆ ಸನ್ಮಾನ -ಕಹಳೆ ನ್ಯೂಸ್

ಪುತ್ತೂರು: ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಹಿಂದೂ ಜಾಗರಣ ವೇದಿಕೆಯ ಆಶ್ರಯದಲ್ಲಿ ಭಾರತದ 80ನೇ ಸ್ವಾತಂತ್ರ್ಯೋತ್ಸವ, ವಂದೇ ಮಾತರಂ ಗೀತೆಗೆ 150 ವರ್ಷ ತುಂಬಿದ ಸ್ಮರಣೆ ಹಾಗೂ ಅಖಂಡ ಭಾರತದ ಸಂಕಲ್ಪದೊಂದಿಗೆ ಆ.14ರಂದು ರಾತ್ರಿ ಪುತ್ತೂರಿನಲ್ಲಿ ಬೃಹತ್ ಪಂಜಿನ ಮೆರವಣಿಗೆ ನಡೆಯಿತು.

ಜಾಹೀರಾತು

ಬೊಳುವಾರಿನ ಓಂ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದ ಬಳಿಯಿಂದ ಆರಂಭಗೊಂಡ ಮೆರವಣಿಗೆ ಕಿಲ್ಲೆ ಮೈದಾನದ ಅಮರ್ ಜವಾನ್ ಸ್ಮಾರಕ ಜ್ಯೋತಿ ಬಳಿ ಸಮಾಪನಗೊಂಡಿತು. ಹಿಂದೂ ಜಾಗರಣ ವೇದಿಕೆ ಗೌರವಾಧ್ಯಕ್ಷ ಡಾ. ಎಂ.ಕೆ. ಪ್ರಸಾದ್ ಅವರು ಬೆಳಕಿನ ದೊಂದಿಯನ್ನು ಪ್ರಮುಖರಿಗೆ ಹಸ್ತಾಂತರಿಸಿ, ತೆಂಗಿನಕಾಯಿ ಒಡೆದು ಮೆರವಣಿಗೆಗೆ ಚಾಲನೆ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಬಳಿಕ ಕಿಲ್ಲೆ ಮೈದಾನದ ಅಮರ್ ಜವಾನ್ ಸ್ಮಾರಕದ ಬಳಿ ಭಾರತ ಮಾತಾ ಪೂಜೆ ಹಾಗೂ ನಿವೃತ್ತ ಯೋಧರ ಸನ್ಮಾನ ಕಾರ್ಯಕ್ರಮ ನಡೆಯಿತು. ಭಾರತ ಮಾತೆಗೆ ಪುಷ್ಪಾರ್ಚನೆ ಹಾಗೂ ದೀಪ ಬೆಳಗಿಸಿ ಯೋಧರಿಗೆ ಗೌರವ ಸಲ್ಲಿಸಲಾಯಿತು.

ನಿವೃತ್ತ ಯೋಧರಾದ ಹವಾಲ್ದಾರ್ ಅಶೋಕ್ ನೆಲಪ್ಪಾಲು, ಮುರ ಪಲ್ಲತ್ತಾರು ನಿವಾಸಿ ಸುಂದರ ಪೂಜಾರಿ ಹಾಗೂ ಆಪರೇಷನ್ ಸಿಂಧೂರ್‌ನಲ್ಲಿ ಭಾಗವಹಿಸಿದ್ದ ಚಂದ್ರಶೇಖರ್ ಯು. ಅವರನ್ನು ಸನ್ಮಾನಿಸಲಾಯಿತು.

ಸನ್ಮಾನಿತರ ಪರವಾಗಿ ಮಾತನಾಡಿದ ಚಂದ್ರಶೇಖರ್, ದೇಶದ ಗಡಿಯನ್ನು ಕಾಯುವ ಯೋಧರು ಮಾತ್ರ ದೇಶ ಸೇವೆ ಮಾಡುತ್ತಿಲ್ಲ. ಪ್ರತಿಯೊಬ್ಬರೂ ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುವ ಮೂಲಕ ದೇಶ ಸೇವೆ ಮಾಡಬಹುದು. ಇಂತಹ ಕಾರ್ಯಕ್ರಮಗಳು ಮುಂದಿನ ಪೀಳಿಗೆಗೆ ಪ್ರೇರಣೆಯಾಗಬೇಕು ಎಂದರು.

ರಾಷ್ಟ್ರೀಯತೆ, ದೇಶದ ಏಕತೆಗೆ ಕರೆ

ಸಭೆಯಲ್ಲಿ ಸುಳ್ಯ ಸೇವಾ ಭಾರತಿಯ ಪ್ರಮುಖ ರಾಜೇಶ್ ಮೇನಾಲ ದಿಕ್ಕೂಚಿ ಭಾಷಣ ಮಾಡಿದರು. ದೇಶದ ಸ್ವಾತಂತ್ರ್ಯ ಹೋರಾಟ, ಭಾರತ ವಿಭಜನೆ ಹಾಗೂ ಸ್ವಾತಂತ್ರ್ಯಾನಂತರದ ರಾಜಕೀಯ ಬೆಳವಣಿಗೆಗಳನ್ನು ಉಲ್ಲೇಖಿಸಿದ ಅವರು, ರಾಷ್ಟ್ರೀಯತೆ ಹಾಗೂ ದೇಶದ ಏಕತೆಯ ಅಗತ್ಯವನ್ನು ಪ್ರತಿಪಾದಿಸಿದರು.

ದೇಶವನ್ನು ಒಗ್ಗೂಡಿಸುವ ಬದಲು ಎಡಪಂಥೀಯ ಸಿದ್ಧಾಂತಗಳು ವಿಭಜನೆಯತ್ತ ಕೊಂಡೊಯ್ಯುತ್ತಿವೆ ಎಂದು ಅವರು ಆರೋಪಿಸಿದರು. ರಾಜಕೀಯ ನಾಯಕರ ನೀತಿ-ನಿಲುವುಗಳನ್ನು ಟೀಕಿಸುವುದು ಪ್ರಜಾಪ್ರಭುತ್ವದ ಸಹಜ ಪ್ರಕ್ರಿಯೆಯಾದರೂ, ವೈಯಕ್ತಿಕ ನಿಂದನೆಗೆ ಇಳಿಯುವುದು ಸರಿಯಲ್ಲ. ದೇಶದ ಏಕತೆ ಮತ್ತು ಸಾಮಾಜಿಕ ಸಾಮರಸ್ಯ ಬಲಪಡಿಸಲು ದೇಶಭಕ್ತರು ಸಂಘಟಿತರಾಗಿ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.

1947ರಲ್ಲಿ ಭಾರತ ವಿಭಜನೆಯಾಗಿ ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ರಾಷ್ಟ್ರಗಳು ಅಸ್ತಿತ್ವಕ್ಕೆ ಬಂದವು. ವಿಭಜನೆಯ ಪರಿಣಾಮಗಳ ಬಗ್ಗೆ ಹಲವು ರಾಷ್ಟ್ರೀಯ ನಾಯಕರು ಎಚ್ಚರಿಕೆ ನೀಡಿದ್ದರು ಎಂದು ರಾಜೇಶ್ ಮೇನಾಲ ಹೇಳಿದರು.

ಇತ್ತೀಚೆಗೆ ಜಂತರ್ ಮಂತರ್‌ನಲ್ಲಿ ನಡೆದ ಘಟನೆಯನ್ನು ಉಲ್ಲೇಖಿಸಿದ ಅವರು, ಪ್ರಧಾನಿಯವರ ವೈಯಕ್ತಿಕ ಜೀವನ, ದೈಹಿಕ ರೂಪ, ಕುಟುಂಬ ಹಾಗೂ ವೈಯಕ್ತಿಕ ವಿಚಾರಗಳನ್ನು ಗುರಿಯಾಗಿಸಿಕೊಂಡು ಅವಹೇಳನ ಮಾಡುವುದು ರಾಜಕೀಯ ಸಂಸ್ಕೃತಿಗೆ ಶೋಭೆ ತರುವುದಿಲ್ಲ ಎಂದು ಹೇಳಿದರು.

ಪುತ್ತೂರಿನ ಉದ್ಯಮಿ ಕೇಶವ ನಾಯಕ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ವಾತಂತ್ರ್ಯ ಬಂದು 80 ವರ್ಷಗಳ ಬಳಿಕ ಭಾರತ್ ಜೋಡೋ ಮಾಡುವ ಮಾತು ಕೇಳಿಬರುತ್ತಿದೆ. ಭಾರತವನ್ನು ತೋಡಿದವರು ಭಾರತ್ ಜೋಡೋ ಯಾಕೆ ಮಾಡುತ್ತಾರೆ ಎಂಬ ಪ್ರಶ್ನೆ ಎದುರಾಗುತ್ತದೆ. ದೇಶ ಸದಾ ಒಗ್ಗಟ್ಟಿನಿಂದ ಇರಬೇಕು ಎಂದರು.

ಅಖಂಡ ಭಾರತ ಪ್ರತಿಜ್ಞೆ

ಸಭೆಯ ಕೊನೆಯಲ್ಲಿ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಪ್ರಮುಖ್ ದಿನೇಶ್ ಪಂಜಿಗ ಅವರು ಅಖಂಡ ಭಾರತ ಪ್ರತಿಜ್ಞಾ ವಿಧಿ ಬೋಧಿಸಿದರು. ವಿಶ್ವ ಹಿಂದೂ ಪರಿಷತ್ ನಗರ ಪ್ರಖಂಡ ಗೋ ರಕ್ಷಾ ಪ್ರಮುಖ್ ಧನರಾಜ್ ಕೊಡಿಪ್ಪಾಡಿ ಹಾಗೂ ಹಿಂದೂ ಜಾಗರಣ ವೇದಿಕೆ ತಾಲೂಕು ಸಹ ಸಂಯೋಜಕ ಸುಭಾಶ್ ಮುಕ್ವೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಿವಪ್ರಸಾದ್ ಹಾಗೂ ಹರೀಶ್ ದೋಳಾಡಿ ಅತಿಥಿಗಳನ್ನು ಗೌರವಿಸಿದರು. ಕು. ಗರಿಮಾ ಹಾಗೂ ಕು. ವೈಷ್ಣವಿ ಪ್ರಾರ್ಥಿಸಿದರು. ವಿಶ್ವ ಹಿಂದೂ ಪರಿಷತ್ ನಗರ ಪ್ರಖಂಡ ಅಧ್ಯಕ್ಷ ದಾಮೋದರ್ ಪಾಟಾಳಿ ಸ್ವಾಗತಿಸಿದರು. ಸಂತೋಷ್ ರೈ ವಂದಿಸಿದರು. ವಿಶಾಕ್ ರೈ ಕಾರ್ಯಕ್ರಮ ನಿರೂಪಿಸಿದರು.

ಕೊನೆಯಲ್ಲಿ ವಿವೇಕಾನಂದ ಶಾಲೆಯ ವಿದ್ಯಾರ್ಥಿಗಳು ‘ವಂದೇ ಮಾತರಂ’ ಗೀತೆಯನ್ನು ಹಾಡುವ ಮೂಲಕ ಗೀತೆಯ 150ನೇ ವರ್ಷದ ಸ್ಮರಣೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ನ್ಯಾಯವಾದಿ ಮಹೇಶ್ ಕಜೆ, ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಡಾ. ಕೃಷ್ಣಪ್ರಸನ್ನ, ಜಿಲ್ಲಾ ಉಪಾಧ್ಯಕ್ಷ ಸತೀಶ್ ಬಿ.ಎಸ್., ಮುರಳಿಕೃಷ್ಣ ಹಸಂತಡ್ಕ, ಜಯಂತ ಶೆಟ್ಟಿ ಕಂಬಳತಡ್ಡ, ಸಹದೇವ್, ಪ್ರಸನ್ನ ಮಾರ್ತ, ದಯಾನಂದ ಶೆಟ್ಟಿ ಉಜಿರೆಮಾರು, ಶಿವಕುಮಾರ್, ಯತೀಂದ್ರ ಆರುವಾರು, ಶಶಿಧರ್ ನಾಯಕ್, ಸತೀಶ್ ನಾಯ್ಕ್, ನಾಗೇಶ್ ಟಿ.ಎಸ್., ಉಜ್ವಲ್ ಪ್ರಭು, ಸಂತೋಷ್ ರೈ ಕೈಕಾರ, ವಿಶ್ವನಾಥ ಗೌಡ ಬನ್ನೂರು, ರಾಜೇಶ್ ಬನ್ನೂರು, ಮಾಧವ ಪೂಜಾರಿ, ಶೇಷಪ್ಪ ಬೆಳ್ಳಿಪ್ಪಾಡಿ, ವಿರೂಪಾಕ್ಷ ಭಟ್ ಮಚ್ಚಿಮಲೆ, ಲಕ್ಷ್ಮಣ ಬೆಳ್ಳಿಪ್ಪಾಡಿ, ಮಹೇಶ್ ಕೇರಿ, ವಿದ್ಯಾಧರ್ ಜೈನ್, ನಾಗೇಂದ್ರ ಬಾಳಿಗ, ಹರಿಪ್ರಸಾದ್ ಯಾದವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.