
ಪುತ್ತೂರು : ವಿದ್ಯಾಸಂಸ್ಥೆಗಳಲ್ಲಿ ವಿವಿಧ ಸಂಘಗಳು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ನಮ್ಮ ಔದ್ಯಮಿಕ ಬದುಕಿಗೆ ಸಹಕಾರಿಯಾಗುತ್ತವೆ. ಅಂತಹಾ ಸಂಘಗಳಿಗೆ ನಾವು ಕೃತಜ್ಞರಾಗಿರಬೇಕು. ಪ್ರತಿಯೊಬ್ಬರಿಗೂ ಸಮಾಜದಲ್ಲಿ ತಮ್ಮದೇ ಆದ ಅಸ್ತಿತ್ವವಿದೆ. ಯಶಸ್ಸಿಗೆ ಕೊನೆಯೆಂಬದಿಲ್ಲ ಹೀಗಾಗಿ ಸಮಾಜಕ್ಕೆ ಕೀರ್ತಿ ತರುವ ಸಾಧನೆಯೇ ನಿಜವಾದ ಯಶಸ್ಸಾಗಿರುತ್ತದೆ ಎಂದು ಪುತ್ತೂರು ಕೆನರಾ ಬ್ಯಾಂಕ್ ಪ್ರಾದೇಶಿಕ ಕಛೇರಿಯ ವಿಭಾಗೀಯ ವ್ಯವಸ್ಥಾಪಕ ಹರಿಪ್ರಸಾದ್ ಎಂ ಹೇಳಿದರು.
ಇವರು ವಿವೇಕಾನಂದ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ)ಪುತ್ತೂರು, ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಹಾಗೂ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಹಯೋಗದಲ್ಲಿ ನಡೆದ 2026-27ನೇ ಶೈಕ್ಷಣಿಕ ವರ್ಷದ ಮ್ಯಾನೇಜ್ಮೆಂಟ್ ಕ್ಲಬ್ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಕೆನರಾ ಬ್ಯಾಂಕಿನ ನೆಹರುನಗರ ಶಾಖೆಯ ವ್ಯವಸ್ಥಾಪಕ ತೇಜ ಕುಮಾರ್.ಕೆ ಮಾತನಾಡಿ, ಯಶಸ್ಸಿಗೆ ವಿವಿಧ ದಾರಿಗಳಿರುತ್ತವೆ. ನಮ್ಮಲ್ಲಿರುವ ಕೌಶಲ್ಯಗಳನ್ನು ನಾವು ಹೆಚ್ಚಿಸಿಕೊಳ್ಳಬೇಕು. ಜೊತೆಗೆ ಸ್ವಪ್ರಯತ್ನದಿಂದ ಯಶಸ್ಸನ್ನು ಕಂಡುಕೊಳ್ಳಬೇಕು ಎಂದು ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಸ್ನಾತಕೋತ್ತರ ವಿಭಾಗದ ಡೀನ್ ಡಾ.ವಿಜಯಸರಸ್ವತಿ.ಬಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಮ್ಯಾನೇಜ್ಮೆಂಟ್ ಕ್ಲಬ್‍ನ ಅಧ್ಯಕ್ಷೆ ಅಂತಿಮ ಎಂ.ಕಾಂ ವಿದ್ಯಾರ್ಥಿನಿ ಅನನ್ಯಾ ಹಾಗೂ ಕಾರ್ಯದರ್ಶಿ ಪ್ರಥಮ ಎಂ.ಕಾಂ ವಿದ್ಯಾರ್ಥಿನಿ ಧನ್ಯಾ ನಾಯರ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಅಂತಿಮ ಎಂ.ಕಾಂ ವಿದ್ಯಾರ್ಥಿಗಳಾದ ದೀಕ್ಷಾ.ಕೆ ಸ್ವಾಗತಿಸಿ, ಉನ್ನತಿ ವಂದಿಸಿ, ದೀಕ್ಷಾ ನಿರೂಪಿಸಿದರು.











