
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಾಜೌರಿ ವಲಯದ ಗಡಿಯಲ್ಲಿ (ಎಲ್‌ಒಸಿ) ಶುಕ್ರವಾರ (ಜು.17) ರಾತ್ರಿ ಸುಮಾರು ಎರಡು ಗಂಟೆಗಳ ಕಾಲ ಉಗ್ರರು ಹಾಗೂ ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಆಪರೇಷನ್ ಸಿಂಧೂರ್ ಬಳಿಕ ಇದು ಮೊದಲ ಸಲ ನಡೆದ ಭಾರೀ ಪ್ರಮಾಣದ ದಾಳಿಯಾಗಿದೆ. ಇದಕ್ಕೂ ಮುನ್ನ 8-10 ಬಾರಿ ಸಣ್ಣ ಪ್ರಮಾಣದ ಗುಂಡಿನ ದಾಳಿಗಳು ನಡೆದಿವೆ.
ಭಯೋತ್ಪಾದಕರು ಒಳನುಸುಳಸಲು ಪ್ರಯತ್ನಿಸಿದ್ದು, ಸೇನಾ ಪಡೆಗಳು ಅವರನ್ನು ಹಿಮ್ಮೆಟ್ಟಿಸಿದ್ದಾರೆ. ಬೆಳಿಗ್ಗೆ 9:50ರ ಸುಮಾರಿಗೆ ಪಾಕಿಸ್ತಾನದ (Pakistan) ಕಡೆಯಿಂದ ಅಪ್ರಚೋದಿತ ಗುಂಡಿನ ದಾಳಿ ಪ್ರಾರಂಭವಾಯಿತು. ಈ ವೇಳೆ ಗಡಿಯನ್ನು ಕಾಯುತ್ತಿದ್ದ ಭಾರತೀಯ ಸೇನಾ ಪಡೆಗಳು ಪ್ರತಿದಾಳಿ ನಡೆಸಿವೆ. ದಾಳಿಯಲ್ಲಿ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶನಿವಾರ (ಜು.18) ಬೆಳಿಗ್ಗೆ ಉಗ್ರರ ಶೋಧ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ. ಈ ಪ್ರದೇಶದಲ್ಲಿ ಹೆಚ್ಚಿನ ನಿಗಾ ಇಡಲಾಗಿದೆ. ದೇಶದ ಪ್ರಕ್ಷುಬ್ಧತೆಯಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಪಾಕಿಸ್ತಾನ ಎಲ್‌ಒಸಿ ಉದ್ದಕ್ಕೂ ಗುಂಡಿನ ದಾಳಿ ನಡೆಸಿದೆ ಎಂದು ಭದ್ರತಾ ವಿಶ್ಲೇಷಕರು ಹೇಳಿದ್ದಾರೆ.
2025ರ ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಮ್‌ನ (Pahalgam) ಬೈಸರನ್ ವ್ಯಾಲಿಯಲ್ಲಿ ಉಗ್ರರು 26 ಪ್ರವಾಸಿಗರನ್ನು ಹತ್ಯೆಗೈದಿದ್ದರು. ಇದಕ್ಕೆ ಪ್ರತಿಯಾಗಿ ಮೇ 7 ರಿಂದ 10 ರವರೆಗೆ ಭಾರತ ಪಾಕ್ ಉಗ್ರರ ವಿರುದ್ಧ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಡೆಸಿತ್ತು.
22 ನಿಮಿಷಗಳ ಕಾಲ ನಡೆದ ದಾಳಿಯಲ್ಲಿ ಭಾರತೀಯ ಪಡೆಗಳು ಎಲ್‌ಒಸಿಯನ್ನು ದಾಟದೆ ಒಂಬತ್ತು ಭಯೋತ್ಪಾದಕ ಕೇಂದ್ರಗಳ ಮೇಲೆ ದಾಳಿ ಮಾಡಿದ್ದವು. 26 ನಿಖರ ಕ್ಷಿಪಣಿಗಳನ್ನು ಹಾರಿಸಿ ಮುರಿಡ್ಕೆಯಲ್ಲಿರುವ ಲಷ್ಕರ್-ಎ-ತೈಬಾ ಪ್ರಧಾನ ಕಚೇರಿ ಮತ್ತು ಬಹಾವಲ್ಪುರದಲ್ಲಿರುವ ಜೈಶ್-ಎ-ಮೊಹಮ್ಮದ್ ಪ್ರಧಾನ ಕಚೇರಿಯನ್ನು ನಾಶಪಡಿಸಲಾಗಿತ್ತು.











