ಬಿ.ಸಿ. ರೋಡ್ ಬರ್ಬರ ಹತ್ಯೆ: ಮೃತ ಲಾವಣ್ಯ ನಿವಾಸಕ್ಕೆ ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರು ಭೇಟಿ, ಸಾಂತ್ವನ; ಬಂಧಿತ ಆರೋಪಿಗೆ ಗಲ್ಲುಶಿಕ್ಷೆ ಅಥವಾ ಎನ್‌ಕೌಂಟರ್‌ಗೆ ಆಗ್ರಹ -ಕಹಳೆ ನ್ಯೂಸ್

ಪುತ್ತೂರು: ಬಿ.ಸಿ. ರೋಡ್‌ನ ಕೆಎಸ್‌ಆರ್‌ಟಿಸಿ ನೂತನ ಬಸ್ ನಿಲ್ದಾಣದ ಬಳಿ ದುಷ್ಕರ್ಮಿಯಿಂದ ಬರ್ಬರವಾಗಿ ಹತ್ಯೆಯಾದ ಯುವತಿ ಲಾವಣ್ಯ ಅವರ ನಿವಾಸಕ್ಕೆ ವಿಧಾನ ಪರಿಷತ್ ಶಾಸಕರಾದ ಶ್ರೀ ಕಿಶೋರ್ ಕುಮಾರ್ ಪುತ್ತೂರು ಅವರು ಇಂದು ಭೇಟಿ ನೀಡಿ, ಶೋಕತಪ್ತ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಇದೇ ಸಂದರ್ಭದಲ್ಲಿ ಘಟನೆಯ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಶಾಸಕರು, ರಾಜ್ಯದ ಕಾನೂನು ಸುವ್ಯವಸ್ಥೆ ಹಾಗೂ ಸಮಾಜದ ಮಾನಸಿಕತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಸಮಾಜದ ಜಡತ್ವಕ್ಕೆ ಶಾಸಕರ ಬೇಸರ:
“ನಡುಹಗಲಲ್ಲೇ ಹೆಣ್ಣುಮಗಳೊಬ್ಬಳಿಗೆ ರಕ್ಷಣೆ ಇಲ್ಲ ಎಂದರೆ ನಮ್ಮ ವ್ಯವಸ್ಥೆ ಮತ್ತು ಸಮಾಜದ ಬಗ್ಗೆ ತೀವ್ರ ನಾಚಿಕೆ ಹಾಗೂ ದುಃಖವಾಗುತ್ತಿದೆ. ಒಬ್ಬ ನರಾಧಮ ಕೈಯಲ್ಲಿ ತಲ್ವಾರ್ ಹಿಡಿದು ಹೆಣ್ಣುಮಗಳನ್ನು ಕೊಚ್ಚುತ್ತಿರುವಾಗ, ರಕ್ಷಣೆಗೆ ಧಾವಿಸುವ ಬದಲು ಸುತ್ತಲಿನ ಜನ ಮೊಬೈಲ್‌ನಲ್ಲಿ ವಿಡಿಯೋ ಮಾಡುತ್ತಾ ನಿಂತಿದ್ದದ್ದು ಅತ್ಯಂತ ಬೇಸರದ ಸಂಗತಿ. ಅಲ್ಲಿದ್ದವರು ಸ್ವಲ್ಪ ಒಗ್ಗಟ್ಟು ಪ್ರದರ್ಶಿಸಿ, ಜೋರು ಮಾಡಿ ಆತನನ್ನು ತಡೆದಿದ್ದರೆ ಇಂದು ಆ ಅಮಾಯಕ ಜೀವ ಖಂಡಿತ ಉಳಿಯುತ್ತಿತ್ತೇನೋ. ನಮ್ಮ ಸಮಾಜದ ಈ ಜಡತ್ವ ಮತ್ತು ಮಾನಸಿಕತೆಯನ್ನು ನೋಡಿ ನಾವೇ ತಲೆ ತಗ್ಗಿಸುವಂತಾಗಿದೆ” ಎಂದು ಶಾಸಕರು ಖೇದ ವ್ಯಕ್ತಪಡಿಸಿದರು.
ಬಂಧಿತ ಆರೋಪಿಗೆ ಕಠಿಣ ಶಿಕ್ಷೆಗೆ ಆಗ್ರಹ:
“ಸಾರ್ವಜನಿಕ ಸ್ಥಳದಲ್ಲಿ, ಜನನಿಬಿಡ ಪ್ರದೇಶದಲ್ಲೇ ಹೆಣ್ಣುಮಗಳೊಬ್ಬಳನ್ನು ಈ ರೀತಿ ಭೀಕರವಾಗಿ ಕೊಚ್ಚಿ ಕೊಂದಿರುವುದು ಇಡೀ ಸಮಾಜವೇ ತಲೆತಗ್ಗಿಸುವಂತಹ ಕೃತ್ಯ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಯಾವ ಮಟ್ಟಕ್ಕೆ ಕುಸಿದಿದೆ ಎಂಬುದಕ್ಕೆ ಇದೊಂದು ಜ್ವಲಂತ ಉದಾಹರಣೆ. ಈ ಪೈಶಾಚಿಕ ಕೃತ್ಯವೆಸಗಿದ ದುಷ್ಕರ್ಮಿಯನ್ನು ಇದೀಗ ಪೊಲೀಸ್ ಇಲಾಖೆ ಬಂಧಿಸಿದೆ. ಆತ ಯಾವುದೇ ಧರ್ಮ, ಜಾತಿ ಅಥವಾ ಸಮುದಾಯಕ್ಕೆ ಸೇರಿರಲಿ, ಆತ ಮಾಡಿರುವುದು ಕ್ಷಮಿಸಲಾಗದ ಅತ್ಯಂತ ಘೋರವಾದ ಅಪರಾಧ.
ಈಗ ಬಂಧಿತನಾಗಿರುವ ಆತನ ವಿರುದ್ಧ ಕಠಿಣಾತಿ ಕಠಿಣ ಕಾನೂನುಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ, ತ್ವರಿತಗತಿಯಲ್ಲಿ ವಿಚಾರಣೆ ನಡೆಸಿ ಆತನಿಗೆ ಗಲ್ಲುಶಿಕ್ಷೆಯೇ ಆಗುವಂತೆ ಮಾಡಬೇಕು. ಇಂಥಹ ವಿಕೃತ ಮನಸ್ಥಿತಿಯ ಅಪರಾಧಿಗಳಿಗೆ ವಿಚಾರಣೆ, ಜೈಲು ಎಂದು ಕರುಣೆ ತೋರುವ ಪ್ರಶ್ನೆಯೇ ಇಲ್ಲ. ಇಂತಹವರಿಗೆ ಕರುಣೆ ತೋರದೆ ಎನ್‌ಕೌಂಟರ್ ಮಾಡಿದರೂ, ಇಂತಹ ಕಠಿಣ ಮತ್ತು ದಿಟ್ಟ ನಿರ್ಧಾರಕ್ಕೆ ಇಡೀ ನಾಗರಿಕ ಸಮಾಜದ ಸಂಪೂರ್ಣ ಬೆಂಬಲವಿದೆ” ಎಂದು ಕಿಶೋರ್ ಕುಮಾರ್ ಪುತ್ತೂರು ಅವರು ಸ್ಪಷ್ಟಪಡಿಸಿದರು.
ಮೃತ ಯುವತಿಯ ಆತ್ಮಕ್ಕೆ ಸದ್ಗತಿ ದೊರೆಯಲಿ ಹಾಗೂ ಈ ಆಘಾತವನ್ನು ಭರಿಸುವ ಶಕ್ತಿಯನ್ನು ಆಕೆಯ ಕುಟುಂಬಕ್ಕೆ ಭಗವಂತ ಕರುಣಿಸಲಿ ಎಂದು ಅವರು ಪ್ರಾರ್ಥಿಸಿದರು.
ಈ ಸಾಂತ್ವನ ಭೇಟಿಯ ಸಂದರ್ಭದಲ್ಲಿ ಪುತ್ತೂರು ಬಿಜೆಪಿ ನಗರ ಮಂಡಲದ ಅಧ್ಯಕ್ಷರಾದ ಶಿವಕುಮಾರ ಕಲಿಮಾರು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಪ್ರಸನ್ನ ಮಾರ್ತಾ, ಜಿಲ್ಲಾ ಕಾರ್ಯದರ್ಶಿ ವಿದ್ಯಾಗೌರಿ, ಪುತ್ತೂರು ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಶಿಶಿಧರ್ ನಾಯಕ್ ಮತ್ತು ನಾಗೇಂದ್ರ ಬಾಳಿಗ ಉಪಸ್ಥಿತರಿದ್ದರು.











