ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ, ಜಯಂತ್ ಪಡುಬಿದ್ರಿ ಸಂಸ್ಮರಣೆ – ಕಹಳೆ ನ್ಯೂಸ್

ವಿದ್ಯಾರ್ಥಿಗಳು ಕೇವಲ ಪಠ್ಯ ಪುಸ್ತಕಗಳಿಗೆ ಸೀಮಿತವಾಗದೆ, ಪ್ರತಿನಿತ್ಯ ಪತ್ರಿಕೆಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಈ ಮೂಲಕ ಜಗತ್ತಿನ ವಿದ್ಯಮಾನಗಳನ್ನು ಅರಿತುಕೊಂಡು ಜ್ಞಾನಾರ್ಜನೆ ಮಾಡಿದರೆ ಭವಿಷ್ಯದಲ್ಲಿ ಸಾರ್ಥಕ ಜೀವನ ನಡೆಸಲು ಸಾಧ್ಯ ಎಂದು ಸೋದೆ ವಾದಿರಾಜ ಮಠ ಎಜ್ಯುಕೇಶನ್ ಟ್ರಸ್ಟ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ರಾಧಾಕೃಷ್ಣ ಐತಾಳ್ ಹೇಳಿದರು.
ಅವರು ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಇನ್ನಂಜೆಯ ಎಸ್.ವಿ.ಎಚ್. ಪದವಿ ಪೂರ್ವ ಕಾಲೇಜಿನ ದಾಸ ಭವನದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ದಿನಾಚರಣೆ, ಹಿರಿಯ ಪತ್ರಕರ್ತ ದಿವಂಗತ ಬಿ. ಜಯಂತ್ ಪಡುಬಿದ್ರಿ ಅವರ ಸಂಸ್ಮರಣೆ ಹಾಗೂ ದತ್ತಿನಿಧಿ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಾಧ್ಯಮ ರಂಗದಲ್ಲಿ ತೀವ್ರ ಪೈಪೋಟಿ
ಹಿರಿಯ ಜಾನಪದ ಚಿಂತಕ ಡಾ. ವೈ. ಎನ್. ಶೆಟ್ಟಿ ಅವರು ಪತ್ರಕರ್ತ ದಿ. ಜಯಂತ್ ಪಡುಬಿದ್ರಿ ಸ್ಮರಣಾರ್ಥ ದತ್ತಿನಿಧಿ ಪ್ರಶಸ್ತಿಯನ್ನು ವಿತರಿಸಿ ಮಾತನಾಡಿ, “ಪ್ರಸ್ತುತ ದಿನಗಳಲ್ಲಿ ಪತ್ರಿಕೋದ್ಯಮ ಕ್ಷೇತ್ರವು ಅಗಾಧವಾಗಿ ಬೆಳೆಯುತ್ತಿದೆ. ಸಾಂಪ್ರದಾಯಿಕ ಪತ್ರಿಕೋದ್ಯಮಕ್ಕೆ ಹೊಸದಾಗಿ ಸೇರ್ಪಡೆಯಾಗಿರುವ ಸಾಮಾಜಿಕ ಮಾಧ್ಯಮಗಳು ಕೂಡ ತೀವ್ರ ಪೈಪೋಟಿ ನೀಡುತ್ತಿವೆ” ಎಂದರು
“ಪತ್ರಿಕೋದ್ಯಮ ಮತ್ತು ವಿದ್ಯಾರ್ಥಿಗಳ ಪಾತ್ರ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ವಿಜಯಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರ ಜಾನ್ ಡಿಸೋಜ ಕುಂದಾಪುರ ಅವರು, “ವಿದ್ಯಾರ್ಥಿಗಳು ಗ್ರಂಥಾಲಯಗಳಲ್ಲಿ ಪುಸ್ತಕಗಳನ್ನು ಅಧ್ಯಯನ ಮಾಡುವ ಮೂಲಕ ಜೀವನದ ಮಹತ್ವದ ಪಾಠಗಳನ್ನು ಕಲಿತುಕೊಳ್ಳಬೇಕು” ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿನಿ ಮಂಗಳ ಶಿರ್ವ ಪದವು ಅವರಿಗೆ ‘ದತ್ತಿನಿಧಿ’ ಹಾಗೂ ಇನ್ನಂಜೆ ಪದವಿ ಪೂರ್ವ ಕಾಲೇಜಿನ ಅರ್ಹ ವಿದ್ಯಾರ್ಥಿಗಳಿಗೆ ‘ವಿದ್ಯಾರ್ಥಿ ವೇತನ’ವನ್ನು ವಿತರಿಸಲಾಯಿತು.
ಗಣ್ಯರ ಉಪಸ್ಥಿತಿ:
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹಮೀದ್ ಪಡುಬಿದ್ರಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಜಿ. ಕುರ್ಯ, ಕಾರ್ಯದರ್ಶಿ ಸುರೇಶ್ ಎರ್ಮಾಳು ಹಾಗೂ ಎಸ್.ವಿ.ಎಚ್. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಾಜೇಂದ್ರ ಪ್ರಭು ಭಾಗವಹಿಸಿದ್ದರು.
ಸಂಘದ ಜಿಲ್ಲಾ ಸಮಿತಿ ಸದಸ್ಯ ಹರೀಶ್ ಹೆಜಮಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಪುಂಡಲೀಕ ಮರಾಠೆ ಸ್ವಾಗತಿಸಿ, ಪ್ರಕಾಶ ಸುವರ್ಣ ಕಟಪಾಡಿ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಸಂತೋಷ್ ಕಾಪು ಧನ್ಯವಾದ ಸಮರ್ಪಿಸಿದರು.









