
ಜೈಪುರ: ರಾಜಸ್ಥಾನದ ಜೋಧ್‌ಪುರ ವಿಮಾನ ನಿಲ್ದಾಣದಲ್ಲಿ 480 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಟರ್ಮಿನಲ್ ಕಟ್ಟಡವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಇದೇ ವೇಳೆ ಮುಂದಿನ ಹತ್ತು ವರ್ಷಗಳ ಅವಧಿಗೆ 28,840 ಕೋಟಿ ರೂ. ಅನುದಾನ ಹೊಂದಿರುವ ಪರಿಷ್ಕೃತ ಉಡಾನ್ ಯೋಜನೆಗೂ ಅಧಿಕೃತ ಚಾಲನೆ ನೀಡಿದರು.
ಪ್ರಧಾನಿ ಮೋದಿ ಜೋಧ್‌ಪುರ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವೇಳೆ ರಾಜಸ್ಥಾನ ರಾಜ್ಯಪಾಲ ಹರಿಭಾವು ಬಾಗಡೆ, ಕೇಂದ್ರ ಜಲಶಕ್ತಿ ಸಚಿವ ಹಾಗೂ ಜೋಧ್‌ಪುರ ಸಂಸದ ಗಜೇಂದ್ರ ಸಿಂಗ್ ಶೇಖಾವತ್ ಮತ್ತು ಮುಖ್ಯಮಂತ್ರಿ ಭಜನಲಾಲ್ ಶರ್ಮಾ ಸೇರಿದಂತೆ ಹಲವು ಗಣ್ಯರು ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು.
ಬಳಿಕ ಪ್ರಧಾನಿ ಮೋದಿ ರಿಮೋಟ್ ಬಟನ್ ಒತ್ತುವ ಮೂಲಕ ನೂತನ ಟರ್ಮಿನಲ್ ಕಟ್ಟಡದ ಉದ್ಘಾಟನಾ ಫಲಕವನ್ನು ಅನಾವರಣಗೊಳಿಸಿದರು. ನಂತರ ಅವರು ಟರ್ಮಿನಲ್ ಕಟ್ಟಡದ ವಿವಿಧ ವಿಭಾಗಗಳಿಗೆ ಭೇಟಿ ನೀಡಿ, ಪ್ರಯಾಣಿಕರಿಗಾಗಿ ಕಲ್ಪಿಸಲಾಗಿರುವ ಆಧುನಿಕ ಸೌಲಭ್ಯಗಳನ್ನು ಪರಿಶೀಲಿಸಿದರು.
ಸುಮಾರು 480 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ನೂತನ ಟರ್ಮಿನಲ್ ಕಟ್ಟಡವು 23 ಸಾವಿರ ಚದರ ಮೀಟರ್‌ಗಿಂತಲೂ ಹೆಚ್ಚಿನ ವಿಸ್ತೀರ್ಣ ಹೊಂದಿದೆ. ವರ್ಷಕ್ಕೆ 20 ಲಕ್ಷ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯವನ್ನು ಈ ಟರ್ಮಿನಲ್ ಹೊಂದಿದ್ದು, ಭವಿಷ್ಯದ ಪ್ರಯಾಣಿಕರ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ನಿರ್ಮಿಸಲಾಗಿದೆ.
ಪ್ರಯಾಣಿಕರಿಗೆ ಸುಗಮ ಮತ್ತು ಆರಾಮದಾಯಕ ಸೇವೆ ಒದಗಿಸುವ ಉದ್ದೇಶದಿಂದ ಟರ್ಮಿನಲ್‌ನಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ವಿಶಾಲ ನಿರೀಕ್ಷಣಾ ಕೊಠಡಿಗಳು, ಸುಧಾರಿತ ಚೆಕ್-ಇನ್ ವ್ಯವಸ್ಥೆ, ಭದ್ರತಾ ತಪಾಸಣಾ ವ್ಯವಸ್ಥೆ ಹಾಗೂ ಇತರೆ ಪ್ರಯಾಣಿಕ ಸ್ನೇಹಿ ಸೌಲಭ್ಯಗಳನ್ನು ಅಳವಡಿಸಲಾಗಿದೆ.
ಈ ಟರ್ಮಿನಲ್‌ನ ವಿನ್ಯಾಸವು ರಾಜಸ್ಥಾನದ ರಾಜಮನೆತನದ ಪರಂಪರೆಯ ವಾಸ್ತುಶಿಲ್ಪದಿಂದ ಸ್ಫೂರ್ತಿ ಪಡೆದಿದೆ. ಸಾಂಪ್ರದಾಯಿಕ ಕಮಾನುಗಳು ಮತ್ತು ಝರೋಖಾಗಳು ಸೇರಿದಂತೆ ರಾಜಸ್ಥಾನಿ ಶೈಲಿಯ ಅಂಶಗಳನ್ನು ಆಧುನಿಕ ವಾಸ್ತುಶಿಲ್ಪದೊಂದಿಗೆ ಸಂಯೋಜಿಸಿ ಕಟ್ಟಡ ನಿರ್ಮಿಸಲಾಗಿದೆ. ಇದರಿಂದ ಟರ್ಮಿನಲ್‌ಗೆ ವಿಶಿಷ್ಟ ಸಾಂಸ್ಕೃತಿಕ ಗುರುತು ದೊರೆತಿದೆ.









