
ತೆಂಕು ಮತ್ತು ಬಡಗಿನ ಯಕ್ಷಗಾನ ಕಲಾವಿದೆ, ಅರ್ಥಧಾರಿಯಾಗಿ ಕಾಣಿಸಿಕೊಳ್ಳುತ್ತಿರುವ ಶ್ರುತಿ ಬಾಲ್ಯದಲ್ಲಿಯೇ ಯಕ್ಷಗಾನ ಕಲಾವಿದೆಯಾಗಬೇಕೆಂಬ ಬಯಕೆಯನ್ನು ಹೊಂದಿದವರು. ಖ್ಯಾತ ಕಲಾವಿದ ಅಂಬಾ ಪ್ರಸಾದ ಪಾತಾಳ ಇವರಿಂದ ಉಪ್ಪಿನಂಗಡಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಐದನೇ ತರಗತಿಯಲ್ಲಿರುವಾಗ ನಾಟ್ಯ ತರಬೇತಿ ಪಡೆದು ರಂಗ ಪ್ರವೇಶ ಮಾಡಿ ಕನಸನ್ನು ನನಸಾಗಿ ಮಾಡಿಕೊಂಡರು.
ಪ್ರೌಢ ಶಿಕ್ಷಣವನ್ನು ಸರ್ವೋದಯ ಪ್ರೌಢಶಾಲೆ ಪೆರಿಯಡ್ಕ, ಪದವಿ ಪೂರ್ವ ಶಿಕ್ಷಣವನ್ನು ಕೊಂಬೆಟ್ಟು ಜೂನಿಯರ್ ಕಾಲೇಜಿನಲ್ಲಿ ಪಡೆದು ನರಿಮೊಗ್ರು ಮಹಿಳಾ ಐಟಿಐ (ಐಟಿಐ) ಸಂಸ್ಥೆಯಲ್ಲಿ ತರಬೇತಿ ಪಡೆದಿದ್ದಾರೆ. ಯಕ್ಷನಂದನ ಕೊಯ್ಲ ಇವರು ಆಯೋಜಿಸುತ್ತಿದ್ದ ನಾಟ್ಯ ತರಬೇತಿ ಶಿಬಿರದಲ್ಲಿ ಗುರು ಲಕ್ಷ್ಮಣ ಆಚಾರ್ಯ ಎಡಮಂಗಳ ಜೊತೆಗೆ ಸಹ ತರಬೇತುದಾರರಾಗಿಯೂ ತನ್ನ ಯಕ್ಷ ಕಲಾಸಕ್ತಿಯನ್ನು ಮೆರೆದಿದ್ದಾರೆ
ಶ್ರೀದೇವಿ ಮಹಾತ್ಮೆಯ ಶ್ರೀದೇವಿ,ಚಂಡ ಮುಂಡ, ರಕ್ತ ಬೀಜಾಸುರ ಪಾತ್ರವನ್ನು ನಿರ್ವಹಿಸಿ ಸವಾಲನ್ನು ಸ್ವೀಕರಿಸಿ ಮಹಿಷಾಸುರ ಪಾತ್ರವನ್ನು ಮಾಡಿದ ಖ್ಯಾತಿ ಇವರದು.
ಶ್ರೀ ಕೃಷ್ಣ. ಅಭಿಮನ್ಯು. ಸುದರ್ಶನ ,ಭ್ರಮರ ಕುಂತಳೆ. ವರಾಹ ,ದೇವೇಂದ್ರ, ಇಂದ್ರಜಿತು, ಶತ್ರುಘ್ನ,ಕಂಹಾಸುರ ಮೊದಲಾದ ಪುಂಡು ಕಿರೀಟ ಮತ್ತು ಬಣ್ಣದ ವೇಷ ಮಾಡುವುದರೊಂದಿಗ ಹಾಸ್ಯ ಪಾತ್ರಗಳನ್ನು ನಿರ್ವಹಿಸಿ ಮೆಚ್ಚುಗೆ ಗಳಿಸಿದ್ದಾರೆ. ಬಡಗು ತಿಟ್ಟಿನ ಯಕ್ಷಗಾನ ಪ್ರದರ್ಶನದಲ್ಲಿಯೂ ಕಾಣಿಸಿಕೊಂಡ ಪ್ರತಿಭಾವಂತೆ.ಈಗ ತಾಳಮದ್ದಳೆಯಲ್ಲಿಯೂ ಅರ್ಥ ದಾರಿಯಾಗಿ ಮಿಂಚುತ್ತಿದ್ದಾರೆ.
ಇವರ ಯಕ್ಷಗಾನ ಕ್ಷೇತ್ರದ ಸಾಧನೆಗೆ ಪುತ್ತೂರು ರೋಟರಿ ಸುವರ್ಣ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಸಮಾಜ ಕಲ್ಯಾಣ ಸಂಸ್ಥೆ ಹಾಗೂ ವಿಶ್ವ ಕನ್ನಡ ಜಾನಪದ ಪರಿಷತ್ತು ಬೆಂಗಳೂರು ವತಿಯಿಂದ 2025 ರ ವಿಶ್ವ ಮಹಿಳಾ ದಿನಾಚರಣೆ ಸಮಾರಂಭದಲ್ಲಿ “ರಾಷ್ಟ್ರೀಯ ವೀರವನಿತೆ ಯಕ್ಷಗಾನ ನೃತ್ಯ ಕಲಾ ಪ್ರಶಸ್ತಿ” ನೀಡಿ ಗೌರವಿಸಿದೆ.
ಉಪ್ಪಿನಂಗಡಿಯ ಶ್ರೀ ಕಾಳಿಕಾಂಬ ಯಕ್ಷ ಕಲಾ ಸಂಘದ ತಾಳಮದ್ದಳೆ ಕೂಟಗಳಲ್ಲಿ ಭಾಗವಹಿಸುತ್ತಾ ಮಾತುಗಾರಿಕೆಯಲ್ಲಿ ತನ್ನ ಪ್ರೌಢಿಮೆಯನ್ನು ಸಾಧಿಸುತ್ತಿದ್ದಾರೆ. ಸಂಘದ ಖಜಾಂಜಿಯಾಗಿಯೂ ಕರ್ತವ್ಯ ನಿರ್ವಹಿಸುತ್ತಿರುವ ಇವರು ಸಂಘದ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ಮತ್ತು ಸದಸ್ಯರ ಪ್ರೋತ್ಸಾಹಕ್ಕೆ ಆಭಾರಿಯಾಗಿದ್ದಾರೆ.
ಬಾಲಸುಬ್ರಹ್ಮಣ್ಯ ಮತ್ತು ಪ್ರೇಮ ಕಿಶೋರ್ ಸಾರಥ್ಯದ ಸಾಯಿ ಕಲಾ ಯಕ್ಷ ಬಳಗ ಪುತ್ತೂರು ತಂಡದ ಯಕ್ಷಗಾನ ಪ್ರದರ್ಶನಗಳಲ್ಲಿ ಭಾಗವಹಿಸುತ್ತಿದ್ದಾರೆ. ಕಟ್ಟೆ ಫ್ರೆಂಡ್ಸ್ ಬಲ್ನಾಡು, ಪುತ್ತೂರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘ, ಒಕ್ಕಲಿಗ ಸ್ವಸಹಾಯ ಸಂಘ ವಿಟ್ಲ, ಒಕ್ಕಲಿಗ ಮಹಿಳಾ ಸಂಘ ಪುತ್ತೂರು,ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಪುತ್ತೂರು ಮೊದಲಾದ ಸಂಸ್ಥೆಗಳಿಂದ ಸನ್ಮಾನವನ್ನು ಪಡೆದಿರುತ್ತಾರೆ.
ಉತ್ತರ ಕನ್ನಡದ ಸಿದ್ದಾಪುರ, ಉಡುಪಿ , ಚಿಕ್ಕಮಗಳೂರು ಬೆಂಗಳೂರು ಕಡೆಗಳಲ್ಲಿ ಯಕ್ಷಗಾನ ಪ್ರದರ್ಶನದಲ್ಲಿ ಭಾಗಿಯಾಗಿದ್ದಾರೆ. ಮಂಗಳೂರು ಆಕಾಶವಾಣಿ,ಕಹಳೆ ನ್ಯೂಸ್ ನಲ್ಲಿ ಇವರ ಸಂದರ್ಶನ ಪ್ರಸಾರವಾಗಿದೆ. ಉತ್ತಮ ಕಾರ್ಯಕ್ರಮ ನಿರೂಪಕಿಯಾಗಿಯೂ ಗುರುತಿಸಿರುವ ಇವರು ಇದೀಗ ಯಕ್ಷಗಾನ ಡಿಪ್ಲೋಮಾದಲ್ಲಿ ಪದವಿ ಪಡೆದ *ಕರಾವಳಿ ಕರ್ನಾಟಕದ ಪ್ರಥಮ ಮಹಿಳೆ* ಎಂಬುದಾಗಿಯೂ ಗುರುತಿಸಿಕೊಳ್ಳುತ್ತಿದ್ದಾರೆ.
*ಮೈಸೂರಿನ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯ*
ವು 2025- 26ನೇ ಸಾಲಿನಲ್ಲಿ ನಡೆಸಿದ ಎರಡು ಎರಡು ಸೆಮಿಸ್ಟರ್ ಡಿಪ್ಲೋಮಾ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ಬೆಂಗಳೂರಿನ ಕಲಾಕದಂಬ ಆರ್ಟ್ ಸೆಂಟರ್ ನ ಮೂಲಕ ಡಿಪ್ಲೋಮೊ ಪರೀಕ್ಷೆಗೆ ಹಾಜರಾದ ಇವರ ಸಾಧನೆ ನಿಜಕ್ಕೂ ಅಭಿನಂದನೀಯ.










